ಬಿ. ಸರೋಜಾದೇವಿ ಮತ್ತು ತೆಲುಗಿನ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಅವರಿಗೆ Oscar ಗೌರವ ನಮನ ಸಲ್ಲಿಸಿದೆ.

ಪ್ರತಿಷ್ಠಿತ 98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಕೇವಲ ಪ್ರಶಸ್ತಿ ವಿತರಣೆಗೆ ಮಾತ್ರ ಸೀಮಿತವಾಗದೇ, ಭಾವುಕ ಕ್ಷಣಗಳಿಗೂ ಸಾಕ್ಷಿಯಾಯಿತು. ವಿಶೇಷವಾಗಿ ‘ಇನ್ ಮೆಮೋರಿಯಂ’ ವಿಭಾಗದಲ್ಲಿ ವಿಶ್ವದ ವಿವಿಧ ಚಿತ್ರರಂಗಗಳ ದಿಗ್ಗಜರನ್ನು ಸ್ಮರಿಸಲಾಯಿತು.
ಆಸ್ಕರ್ ಅಕಾಡೆಮಿ ಗೌರವ
ಭಾರತೀಯ ಸಿನಿರಂಗಕ್ಕೂ ಈ ಬಾರಿ ಜಾಗತಿಕ ವೇದಿಕೆಯಲ್ಲಿ ಗೌರವ ದೊರಕಿದೆ. ಬಾಲಿವುಡ್ ಹಿರಿಯ ನಟರಾದ ಧರ್ಮೇಂದ್ರ ಮತ್ತು ಮನೋಜ್ ಕುಮಾರ್, ಜೊತೆಗೆ ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಹಾಗೂ ತೆಲುಗಿನ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಅವರನ್ನು ಆಸ್ಕರ್ ಅಕಾಡೆಮಿ ಗೌರವ ನಮನ ಸಲ್ಲಿಸಿದೆ.

ಜಾಗತಿಕ ವೇದಿಕೆಯಲ್ಲಿ ಸಿಗಬೇಕಾದ ಮನ್ನಣೆ ಸಿಗಲಿಲ್ಲ
ಆದರೆ ಲೈವ್ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಹಾಲಿವುಡ್ ತಾರೆಗಳಾದ ರಾಬರ್ಟ್ ರೆಡ್ಫೋರ್ಡ್ ಮತ್ತು ಡಯೇನ್ ಕೀಟನ್ ಅವರಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ಭಾರತೀಯ ದಿಗ್ಗಜರ ಹೆಸರುಗಳು ನೇರಪ್ರಸಾರದಲ್ಲಿ ಕಾಣಿಸದಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಜೀವನಪೂರ್ತಿ ಸಿನಿಮಾಗೆ ಅರ್ಪಿಸಿದ ಕಲಾವಿದರಿಗೆ ಜಾಗತಿಕ ವೇದಿಕೆಯಲ್ಲಿ ಯೋಗ್ಯ ಗೌರವ ಸಿಗಲಿಲ್ಲ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.
READ THIS : ಸೋನಿಯಾ ಗಾಂಧಿಗೆ ದೇವೇಗೌಡರ ಪತ್ರ! ಕಾಂಗ್ರೆಸ್ ನಾಯಕಿಗೆ ಮಾಜಿ ಪ್ರಧಾನಿ ಮಾಡಿರೋ ಮನವಿಯೇನು?
ವೆಬ್ಸೈಟ್ನಲ್ಲಿ ವಿಸ್ತೃತ ಪಟ್ಟಿ
ಈ ಪ್ರತಿಕ್ರಿಯೆಗಳ ಬೆನ್ನಲ್ಲೇ ಎಚ್ಚೆತ್ತ ಆಸ್ಕರ್ ಅಕಾಡೆಮಿಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ 300ಕ್ಕೂ ಹೆಚ್ಚು ಅಗಲಿದ ಕಲಾವಿದರ ವಿಸ್ತೃತ ಪಟ್ಟಿಯನ್ನು ಪ್ರಕಟಿಸಿತು. ಈ ಪಟ್ಟಿಯಲ್ಲಿ ಧರ್ಮೇಂದ್ರ, ಮನೋಜ್ ಕುಮಾರ್, ಬಿ. ಸರೋಜಾದೇವಿ ಮತ್ತು ಕೋಟಾ ಶ್ರೀನಿವಾಸ ರಾವ್ ಅವರ ಫೋಟೋಗಳೊಂದಿಗೆ ಗೌರವ ಸಲ್ಲಿಸಲಾಗಿದೆ.

ಕನ್ನಡದ ಹೆಮ್ಮೆಯ ಬಿ.ಸರೋಜಾ ದೇವಿ
ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ‘ಅಭಿನಯ ಸರಸ್ವತಿ’ ಎಂದೇ ಖ್ಯಾತರಾಗಿದ್ದ ನಟಿ ಬಿ. ಸರೋಜಾದೇವಿ ಅವರು ಜುಲೈ 2025 ರಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
ಅದೇ ರೀತಿ, ತೆಲುಗು ಚಿತ್ರರಂಗದ ದಿಗ್ಗಜ ನಟ, ವಿಲನ್ ಹಾಗೂ ಹಾಸ್ಯ ಪಾತ್ರಗಳ ಮೂಲಕ ಮನೆಮಾತಾಗಿದ್ದ ಕೋಟಾ ಶ್ರೀನಿವಾಸ ರಾವ್ (ಜುಲೈ 2025ರಲ್ಲಿ ನಿಧನ) ಅವರ ಅಪಾರ ಕೊಡುಗೆಯನ್ನೂ ಆಸ್ಕರ್ ಅಕಾಡೆಮಿ ಸ್ಮರಿಸಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ದಿಗ್ಗಜರನ್ನು ನೆನಪಿಸಿಕೊಂಡಿರುವುದು ಚಿತ್ರಪ್ರೇಮಿಗಳಲ್ಲಿ ಭಾವುಕತೆ ಮೂಡಿಸಿದೆ.

MUST WATCH : ಸದನದಲ್ಲಿ ಪ್ಲೆಕ್ಸ್, ಬ್ಯಾನರ್ ಗದ್ದಲ ಸರ್ಕಾರದ ವಿರುದ್ದ ಸುರೇಶ್ ಗೌಡ ಕಿಡಿ




