Kavya Maran ವಿರುದ್ಧ ನೆಟ್ಟಿಗರ ಆಕ್ರೋಶ – ಕೋಟಿ ಕೋಟಿ ಕೊಟ್ಟು ಪಾಕ್ ಆಟಗಾರನ ಖರೀದಿ ಮಾಡಿದ ಸನ್ ರೈಸರ್ಸ್ ಲೀಡ್ಸ್!

ಇಂಗ್ಲೆಂಡ್ನ ಪ್ರತಿಷ್ಠಿತ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಚೆನ್ನೈ ಮೂಲದ ಸನ್ ಗ್ರೂಪ್ ಒಡೆತನದ ಸನ್ರೈಸರ್ಸ್ ಲೀಡ್ಸ್ ಅಚ್ಚರಿಯ ಹೆಜ್ಜೆ ಇಟ್ಟಿದೆ. ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸುವ ಮೂಲಕ ಭಾರತೀಯ ಫ್ರಾಂಚೈಸಿಯೊಂದು ಪಾಕಿಸ್ತಾನಿ ಆಟಗಾರನನ್ನು ಸೇರ್ಪಡೆ ಮಾಡಿಕೊಂಡ ಮೊದಲ ಉದಾಹರಣೆ ಎಂಬ ಚರ್ಚೆ ಶುರುವಾಗಿದೆ. ಈ ನಿರ್ಧಾರ ಭಾರತದಲ್ಲಿ ತೀವ್ರ ವಿರೋಧಕ್ಕೂ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಂಡದ ಸಿಇಒ ಕಾವ್ಯಾ ಮಾರನ್ ವಿರುದ್ಧವೂ ಟೀಕೆಗಳು ವ್ಯಕ್ತವಾಗುತ್ತಿವೆ.
2.34 ಕೋಟಿ ರೂ.ಗೆ ಅಬ್ರಾರ್ ಖರೀದಿ
ಗುರುವಾರ ನಡೆದ ದಿ ಹಂಡ್ರೆಡ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಸನ್ರೈಸರ್ಸ್ ಲೀಡ್ಸ್ ಮತ್ತು ಟ್ರೆಂಟ್ ರಾಕೆಟ್ಸ್ ನಡುವೆ ಅಬ್ರಾರ್ ಅಹ್ಮದ್ಗಾಗಿ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಸನ್ರೈಸರ್ಸ್ ಸಿಇಒ Kavya Maran 1,90,000 ಬ್ರಿಟಿಷ್ ಪೌಂಡ್ಗಳಿಗೆ (ಅಂದಾಜು 2.34 ಕೋಟಿ ರೂ.) ಈ ಮಿಸ್ಟರಿ ಸ್ಪಿನ್ನರ್ ಅನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡರು. ಹರಾಜಿನಲ್ಲಿ ಕಾವ್ಯಾ ಮಾರನ್ ಅವರೇ ಖುದ್ದಾಗಿ ಭಾಗವಹಿಸಿ ಬಿಡ್ಡಿಂಗ್ ಪ್ಯಾಡಲ್ ಎತ್ತಿದ್ದು ವಿಶೇಷವಾಗಿತ್ತು.

READ THIS : ಕ್ರೂಸರ್ – ಬೈಕ್ ನಡುವೆ ಭೀಕರ ಅಪಘಾತ! ಇಬ್ಬರು ದಾರುಣ ಸಾವು
ಮುರಿಯಿತೇ ಅಲಿಖಿತ ನಿಯಮ?
2009ರ ಬಳಿಕ ಭಾರತ-ಪಾಕಿಸ್ತಾನ ರಾಜತಾಂತ್ರಿಕ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ IPL ಸೇರಿದಂತೆ ಭಾರತೀಯ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ಸಾಮಾನ್ಯವಾಗಿ ಖರೀದಿಸದ ಅಲಿಖಿತ ನಿಯಮ ನಡೆದುಬಂದಿದೆ.
ಇದೇ ಕಾರಣದಿಂದ ವಿದೇಶಿ ಲೀಗ್ಗಳಲ್ಲಿಯೂ ಐಪಿಎಲ್ ಮಾಲೀಕತ್ವದ ತಂಡಗಳು ಪಾಕ್ ಆಟಗಾರರ ಮೇಲೆ ಬಿಡ್ ಮಾಡುವುದಿಲ್ಲ ಎಂಬ ಅಭಿಪ್ರಾಯವಿತ್ತು.
ಊಹಾಪೋಹಗಳಿಗೆ ತೆರೆ
ಆದರೆ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸುವ ಮೂಲಕ ಸನ್ರೈಸರ್ಸ್ ಮಾಲೀಕರು ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಈ ನಡೆ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಕ್ರೀಡೆಯನ್ನು ರಾಜಕೀಯದಿಂದ ಬೇರ್ಪಡಿಸಬೇಕು ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸನ್ರೈಸರ್ಸ್ ಲೀಡ್ಸ್ ಹಿನ್ನೆಲೆ
ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಹೊಂದಿರುವ ಸನ್ ಗ್ರೂಪ್, ಕಳೆದ ವರ್ಷ ಇಂಗ್ಲೆಂಡ್ನ ನಾರ್ದರ್ನ್ ಸೂಪರ್ಚಾರ್ಜರ್ಸ್ ತಂಡವನ್ನು ಸಂಪೂರ್ಣವಾಗಿ ಖರೀದಿಸಿ ಅದನ್ನು ಸನ್ರೈಸರ್ಸ್ ಲೀಡ್ಸ್ ಎಂದು ಮರುನಾಮಕರಣ ಮಾಡಿತ್ತು. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಮತ್ತು ಯಾರ್ಕ್ಷೈರ್ ಕೌಂಟಿ ಕ್ಲಬ್ನಿಂದ ಒಟ್ಟು ಷೇರುಗಳನ್ನು ಸುಮಾರು 100 ಮಿಲಿಯನ್ ಪೌಂಡ್ಗಳಿಗೆ (ಸುಮಾರು ₹1,000 ಕೋಟಿ) ಪಡೆದುಕೊಂಡಿತ್ತು.
ಇದೇ ಹರಾಜಿನಲ್ಲಿ ಪಾಕಿಸ್ತಾನದ ಮತ್ತೊಬ್ಬ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರನ್ನು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡ 1,40,000 ಪೌಂಡ್ಗಳಿಗೆ (ಸುಮಾರು ₹1.72 ಕೋಟಿ) ಖರೀದಿಸಿತು. ಆದರೆ ಈ ಫ್ರಾಂಚೈಸಿಗೆ ಐಪಿಎಲ್ ಸಂಪರ್ಕವಿಲ್ಲ. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಹಾಗೂ ಆಲ್ರೌಂಡರ್ ಸೈಮ್ ಅಯೂಬ್ ಅವರನ್ನು ಯಾವುದೇ ತಂಡಗಳು ಖರೀದಿಸದ ಕಾರಣ ಅವರು ಅನ್ಸೋಲ್ಡ್ ಆಗಿ ಉಳಿದರು.

ಇನ್ನು ಇಂಗ್ಲೆಂಡ್ನ ಜನಪ್ರಿಯ ದಿ ಹಂಡ್ರೆಡ್ ಲೀಗ್ ಈ ವರ್ಷ ಜುಲೈ 21ರಿಂದ ಆಗಸ್ಟ್ 16ರವರೆಗೆ ನಡೆಯಲಿದೆ.
MUST WATCH : ಸದನದಲ್ಲೂ AI, CHATGPT ಸದ್ದು ಡಿಕೆಶಿ ಯಾವ ಆಪ್ ಯೂಸ್ ಮಾಡ್ತಾರಂತೆ?




