
BELTANGADI: ಧರ್ಮಸ್ಥಳದ ಬಂಗ್ಲೆಗುಡ್ಡದ ಬಳಿ ನೆಲದ ಮೇಲೆ ಪತ್ತೆಯಾದ ಅಸ್ಥಿಪಂಜರದ ಸ್ಥಳದಲ್ಲಿ ಡ್ರೈವಿಂಗ್ ಲೈಸೆನ್ಸ್ (DL) ಸಿಕ್ಕಿದ್ದು, ಪ್ರಕರಣಕ್ಕೆ ಹೊಸ ದಿಕ್ಕು ಒದಗಿಸಿದೆ. ಹೌದು..DL ಪ್ರಕಾರ, ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಆದಿಶೇಷ ನಾರಾಯಣ ಎಂಬುವರ ಹೆಸರು ಇದ್ದು, ಈ ಮಾಹಿತಿಯ ಆಧಾರದಲ್ಲಿ ವಿಶೇಷ ತನಿಖಾ ತಂಡ (SIT) ಅವರ ಕುಟುಂಬಸ್ಥರನ್ನು ವಿಚಾರಣೆಗೆ ಕರೆದಿತ್ತು.
ಇನ್ನು ಆದಿಶೇಷ ನಾರಾಯಣ 2013ರ ಅಕ್ಟೋಬರ್ 2ರಂದು ನಾಪತ್ತೆಯಾಗಿದ್ದಾಗ ಅವರು ಬಾರ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅವರ ನಾಪತ್ತೆ ಕುರಿತು ಕುಟುಂಬಸ್ಥರು ಯಾವುದೇ ಪೋಲೀಸ್ ಪ್ರಕರಣ ದಾಖಲಿಸಿರಲಿಲ್ಲ. ಇಂದು (ಗುರುವಾರ) ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಆಗಮಿಸಿದ ಕುಟುಂಬಸ್ಥರು ವಿಚಾರಣೆಗೆ ಸಹಕಾರ ನೀಡಿದ್ದು, ನಂತರ ಡಿಎನ್ಎ ಪರೀಕ್ಷೆಗೆ ಮತ್ತೊಮ್ಮೆ ಹಾಜರಾಗುವಂತೆ ಸೂಚಿಸಲಾಗಿದೆ.
ಇನ್ನು ಅಸ್ಥಿಪಂಜರ ಯಾರದು ಎಂಬುದನ್ನು ದೃಢಪಡಿಸಲು ಪೊಲೀಸರು ಮುಂದಿನ ಹಂತದಲ್ಲಿ ಡಿಎನ್ಎ ಪರೀಕ್ಷೆ ನಡೆಸಲಿದ್ದಾರೆ. ಇನ್ನು ನಾಪತ್ತೆಯಾದ ಬಳಿಕ ನಾವು ಆತನನ್ನು ಹುಡುಕಲಿಲ್ಲ. ಮಾನಸಿಕವಾಗಿ ಚೆನ್ನಾಗಿದ್ದ ಎಂದು ಆದಿಶೇಷ ನಾರಾಯಣನ ಕುಟುಂಬಸ್ಥರು ತಿಳಿಸಿದ್ದಾರೆ.




