
ಚಿಕ್ಕಬಳ್ಳಾಪುರ ನಗರಸಭೆಯ ಇಂಜಿನಿಯರ್ ಅರುಣ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರರಿಂದ ಲಂಚ ಬೇಡಿಕೆ ಇಟ್ಟುಕೊಂಡಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಇಂಜಿನಿಯರ್ ಅರುಣ್ ಕುಮಾರ್, ಗುತ್ತಿಗೆದಾರ ಕೃಷ್ಣ ಎಂಬುವರಿಂದ ಕೆಲಸದ ಬಿಲ್ ಪಾಸ್ ಮಾಡಲು 75 ಸಾವಿರ ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದರು. ಮಾತುಕತೆಯ ನಂತರ ಮೊತ್ತದ ಭಾಗವಾಗಿ 35 ಸಾವಿರ ರೂಪಾಯಿಯನ್ನು ಇಂದು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ತಂಡ ಬಲೆ ಬೀಸಿದೆ. ಬೆಳಗ್ಗಿನಿಂದಲೇ ಕಾದು ಕುಳಿತಿದ್ದ ಲೋಕಾಯುಕ್ತ ಅಧಿಕಾರಿಗಳು, ಹಣ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿ ಅರುಣ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ಜನರಿಂದ ಸೇವೆ ನೀಡಬೇಕಾದ ಅಧಿಕಾರಿಗಳು ಜನರ ಹಣಕ್ಕೆ ಕಣ್ಣಿಟ್ಟಿರುವುದು ಇನ್ನೊಮ್ಮೆ ಬಹಿರಂಗವಾಗಿದೆ
ಲೋಕಾಯುಕ್ತ ಡಿವಿಎಸ್ಪಿ ವಿರೇಂದ್ರ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭ್ರಷ್ಟಾಚಾರವನ್ನು ತಡೆಗಟ್ಟಲು ಕೈಗೊಂಡಿರುವ ಈ ಕ್ರಮಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನಗರಸಭೆಯ ಕಾರ್ಯವೈಖರಿ ಮೇಲೆ ಮತ್ತೆ ಪ್ರಶ್ನೆಗಳು ಎದ್ದಿವೆ. ಲಂಚ ಪಡೆಯುವ ವೇಳೆ ಬಲೆ ಬೀಸಿ ಹಿಡಿದಿರುವ ಈ ಪ್ರಕರಣ, ಜನರ ಕಷ್ಟದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಭ್ರಷ್ಟ ಅಧಿಕಾರಿಗಳಿಗೆ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ.




