Gadag ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲಕನ ಅಜಾಗರೂಕ ಚಾಲನೆಯಿಂದ ಮಹಿಳಾ ಪ್ರಯಾಣಿಕರ ಮೇಲೆ ಬಸ್ ಹರಿದ ಭೀಕರ ಅಪಘಾತ ಸಂಭವಿಸಿದೆ.

Gadag ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಯಿಂದ ಭೀಕರ ಅಪಘಾತ ಸಂಭವಿಸಿದೆ. ಬಸ್ ನಿಲ್ದಾಣದ ಆವರಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಪ್ರಯಾಣಿಕರ ಮೇಲೆ ಬಸ್ ಹರಿದಿದ್ದು,
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ ಮಧ್ಯಾಹ್ನ ಈ ಅಪಘಾತ ನಡೆದಿದ್ದು, ಮೂವರು ಮಹಿಳಾ ಪ್ರಯಾಣಿಕರು ಅಪಾಯಕ್ಕೆ ಸಿಲುಕಿದ್ದರು. ಅದೃಷ್ಟವಶಾತ್ ಇಬ್ಬರು ಮಹಿಳೆಯರು ಪ್ರಾಣಾಪಾಯದಿಂದ ಪಾರಾದರೆ, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಕ್ಷಣದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ನೋಡಿದವರಲ್ಲಿ ಆತಂಕ ಮೂಡಿಸಿದೆ.
ತಿರುವಿನಲ್ಲಿ ಅತಿವೇಗವಾಗಿ ಬಂದ ಬಸ್ ಡಿಕ್ಕಿ
ಬಸ್ ನಿಲ್ದಾಣದ ಒಳಭಾಗದಲ್ಲಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದ ವೇಳೆ ತಿರುವಿನಲ್ಲಿ ಏಕಾಏಕಿ ಅತಿವೇಗದಲ್ಲಿ ಬಂದ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಈ ವೇಳೆ ಓರ್ವ ಮಹಿಳೆ ಬಸ್ನ ಹಿಂಬದಿ ಚಕ್ರದ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಮಹಿಳೆಯನ್ನು ಶಾಂತವ್ವ ಸಿದ್ದಪ್ಪ ಕೊರ್ತಿ ಎಂದು ಗುರುತಿಸಲಾಗಿದೆ.
ಇದನ್ನು ಓದಿ : ತಂದೆಯನ್ನೇ ಗುಂಡಿಟ್ಟು ಕೊಂಡ ಮಗ – ದೇಹ ಪೀಸ್ ಪೀಸ್ ಮಾಡಿ ಡ್ರಂನಲ್ಲಿ ಬಚ್ಚಿಟ್ಟ!

ಅಪಘಾತದಲ್ಲಿ ಮಹಿಳೆಯ ಕಾಲಿಗೆ ತೀವ್ರ ಗಾಯವಾಗಿದ್ದು, ಬೆನ್ನಿನ ಭಾಗಕ್ಕೂ ಭಾರೀ ಪೆಟ್ಟು ಬಿದ್ದಿದೆ. ತಕ್ಷಣವೇ ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಸಿಟಿವಿ ದೃಶ್ಯ ವೈರಲ್
ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಎದೆ ಝಲ್ ಎನಿಸುವಂತಿರುವ ಈ ವಿಡಿಯೋ ನೋಡಿದವರು ಚಾಲಕರ ಅಜಾಗರೂಕ ಚಾಲನೆ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆ ಬಳಿಕ ಬಸ್ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವಿಸಿವೆ. ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಚಾಲನೆ ವೇಳೆ ಹೆಚ್ಚಿನ ಜಾಗರೂಕತೆ ಅಗತ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದನ್ನು ನೋಡಿ : ಲೈಬ್ರರಿಯಲ್ಲಿ ಇದೆಂಥಾ ಕರ್ಮಕಾಂಡ, ಗ್ರಂಥಾಲಯದಲ್ಲೇ ಕೂಲಿ ಕಾರ್ಮಿಕರ ವಾಸ




