
80 ವರ್ಷಗಳ ಹಿಂದೆ ಜೀತಕ್ಕೆ ಬಂದವರು, 80 ವರ್ಷಗಳ ದುಡಿಮೆಗೆ ಸಿಕ್ಕ ಫಲ ಅಂಗೈ ಅಗಲ ಜಾಗವಷ್ಟೇ, ಹಂದಿ ಗೂಡಿನಂತಹ ಜಾಗದಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಮೊಮ್ಮಕ್ಕಳ ಸಂಸಾರ, ಮನೆಯಲ್ಲಿ ಮಲಗಲು ಜಾಗವಿಲ್ಲದೆ ರಸ್ತೆಯಲ್ಲೇ ಸ್ನಾನ, ಚರಂಡಿಯೇ ಶೌಚಾಲಯವಾಗಿದೆ, ಅಲೆಮಾರಿಗಳಿಗಿಂತ ಹೀನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ದಲಿತರು.
ರಾಜಧಾನಿ ಬೆಂಗಳೂರಿಗೆ 35 ಕಿ.ಮೀ ದೂರವಷ್ಟೇ, ಆದರೆ ಈ ದಲಿತರ ನೋವಿನ ಕೂಗು ಮಾತ್ರ ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ, ಜನಪ್ರತಿನಿಧಿಗಳ ಕಣ್ಣಿಗೆ ಕಂಡಿಲ್ಲ. ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರಪಾಳ್ಯದಲ್ಲಿನ ದಲಿತ ಕುಟುಂಬಗಳ ದುಸ್ಥಿತಿ ಇದು. ಸವರ್ಣಿಯವರ ಮನೆಗಳಲ್ಲಿ ಜೀತಕ್ಕೆಂದು ಮೂರು ದಲಿತ ಕುಟುಂಬಗಳು ಬೈರಸಂದ್ರ ಗ್ರಾಮಕ್ಕೆ ಬಂದವು, ಅವರ ವಾಸಕ್ಕೆ ಮೂರು ನಿವೇಶನಗಳನ್ನ ನೀಡಲಾಗಿತ್ತು, ಈ ಮೂರು ಕುಟುಂಬಗಳು ಬೆಳೆದು ದೊಡ್ಡಾಗಿದೆ. ಆದರೆ, ಅದೇ ಇಕ್ಕಾಟದ ಮನೆಯಲ್ಲಿ ಅಜ್ಜ-ಅಜ್ಜ, ಅಪ್ಪ-ಅಪ್ಪ, ಮಕ್ಕಳ ಸಂಸಾರ ನಡೆಯುತ್ತಿದೆ.
ಈ ಹಿಂದೆಯೇ ಜೀತ ಬಿಟ್ಟಿರುವ ದಲಿತರು ಕೂಲಿ ಕೆಲಸಕ್ಕೆ ಹೋಗುತ್ತಾರೆ, ಬರುವ ಮೂರು ಕಾಸಿಗೆ ಸಂಸಾರ ನಡೆಸುವುದೇ ಕಷ್ಟವಾಗಿದೆ, ಇಂತಹ ಪರಿಸ್ಥಿತಿಯಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟುವುದು ಅಸಾಧ್ಯವಾದ ಮಾತು ಇವರ ಪಾಲಿಗೆ, ಅಶ್ರಯ ಯೋಜನೆಯಡಿ ನಿವೇಶನ ಕೊಡುವಂತೆ ಅರ್ಜಿ ಹಾಕುತ್ತಲೇ ಬಂದಿದ್ದಾರೆ. ಆದರೆ ಪಂಚಾಯಿತಿಯಿಂದ ಕೊಡುತ್ತಿರುವ ಉತ್ತರ ಸರ್ಕಾರ ಜಾಗ ಇಲ್ಲ ಎಂದು.
ದಲಿತ ಮುಖಂಡರಾದ ನರೇಂದ್ರಮೂರ್ತಿ ಮಾಡೇಶ್ವರ ಮಾತನಾಡಿ, ಬೈರಸಂದ್ರ ಗ್ರಾಮದಲ್ಲಿ 40ಕ್ಕೂ ಹೆಚ್ಚು ದಲಿತ ಮಹಿಳೆಯರಿದ್ದಾರೆ, ಅವರ ಪಾಲಿಗೆ ಸ್ನಾನ ಮಾಡುವುದು ಚಿತ್ರಹಿಂಸೆಯೇ, ಯಾರಾದ್ರು ನೋಡುತ್ತರೋ ಇದೇ ಅಂಜಿಕೆಯಲ್ಲಿ ಸ್ನಾನ ಮಾಡಬೇಕು, ಮಳೆ ಬಂದ್ರೆ ಸ್ನಾನ ಮಾಡಲು ಸಾಧ್ಯ ಇಲ್ಲ, ಬರ್ಹಿದೆಸೆಗಾಗಿ ಮಕ್ಕಳನ್ನು ದೂರಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗದೆ, ಮನೆ ಮುಂದಿನ ಚರಂಡಿಗಳಲ್ಲಿ ಬರ್ಹಿದೆಸೆ ಮಾಡಿಸಿ ನೀರು ಹಾಕುತ್ತಾರೆ, ಇದೇ ದಾರಿಯಲ್ಲಿ ಬರುವ ಸರ್ವಣಿಯರು ಮೂಗು ಮುಚ್ಚಿಕೊಂಡು ಹೋಗುತ್ತಾರೆ, ಇಂತಹ ಹೀನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ, ಗೌರವಯುತ ಜೀವನ ಮಾಡಬೇಕಾದರೆ ಅವರಿಗೆ ನಿವೇಶನದ ಅಗತ್ಯವಿದೆ ಎಂದರು.
ಈ ವೇಳೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ನರೇಂದ್ರಮೂರ್ತಿ ಮಾಡೇಶ್ವರ, ಕಾರ್ಯದರ್ಶಿ ಮೈಲಾರಪ್ಪ ನಂದಿಗುಂದ, ದಲಿತ ಮುಖಂಡರಾದ ಮುಖಂಡರಾದ ನರಸಿಂಹಮೂರ್ತಿ ದೊಡ್ಡಕುಕ್ಕನಹಳ್ಳಿ ಪದಾಧಿಕಾರಿಗಳು ಹಾಜರಿದ್ರು.




