ಕೇಂದ್ರ Budget 2026 ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು 15 ಪುರಾತತ್ವ ಸ್ಥಳಗಳನ್ನು ಅನುಭವ-ಚಾಲಿತ ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ Union Budget 2026 ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಮಾಡಿದ್ದಾರೆ.
ದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ 15 ಪುರಾತತ್ವ ಸ್ಥಳಗಳನ್ನು ರೋಮಾಂಚಕ ಹಾಗೂ ಅನುಭವ-ಚಾಲಿತ ಸಾಂಸ್ಕೃತಿಕ ತಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ಇದರಿಂದ ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಸ್ಥಳೀಯ ಆರ್ಥಿಕತೆಗೆ ಬಲ ಸಿಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
2026ನೇ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದರು.
ಇದು ಅವರ 9ನೇ ಬಜೆಟ್ ಮಂಡನೆ ಆಗಿದ್ದು, ರವಿದಾಸ್ ಜಯಂತಿ ಹಾಗೂ ಮಾಘ ಪೂರ್ಣಿಮೆ ದಿನದಂದು ಬಜೆಟ್ ಮಂಡಿಸುತ್ತಿರುವುದಾಗಿ ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ದೇಶದ ಆರ್ಥಿಕ ಬೆಳವಣಿಗೆ ಮತ್ತು ಮೂಲಸೌಕರ್ಯ ವಿಕಾಸಕ್ಕೆ ಈ ಬಜೆಟ್ ಪ್ರಮುಖ ದಿಕ್ಕು ನೀಡುತ್ತದೆ ಎಂದು ಅವರು ತಿಳಿಸಿದರು.
ವಿದೇಶಿ ಹೂಡಿಕೆದಾರರಿಗೆ ಗುಡ್ ನ್ಯೂಸ್
ವಿದೇಶಿ ವಿನಿಮಯ ಕಾನೂನಿನಲ್ಲಿ (Foreign Exchange Law) ಪರಿಷ್ಕರಣೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಕ್ರಮದಿಂದ ವಿದೇಶಿ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದ್ದು,
ಭಾರತದಲ್ಲಿ ಹೂಡಿಕೆ ಮಾಡಲು ಮತ್ತಷ್ಟು ಪ್ರೋತ್ಸಾಹ ದೊರೆಯಲಿದೆ. ಇದರ ಪರಿಣಾಮವಾಗಿ ದೇಶಕ್ಕೆ ಹೆಚ್ಚಿನ ವಿದೇಶಿ ಬಂಡವಾಳ ಹರಿದುಬರುವ ನಿರೀಕ್ಷೆ ವ್ಯಕ್ತವಾಗಿದೆ.

Union Budget 2026 ನಲ್ಲಿ ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ನೀಡುವ ಘೋಷಣೆಯೂ ಮಾಡಲಾಗಿದೆ. ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಈ ಕ್ರಮದಿಂದ ಮಹಿಳೆಯರು ಹೊಸ ಉದ್ಯಮ ಆರಂಭಿಸಲು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಹಕಾರಿಯಾಗಲಿದೆ.
20 ರಾಷ್ಟ್ರೀಯ ಜಲಮಾರ್ಗ ನಿರ್ಮಾಣ ಗುರಿ
ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಮುಂದಿನ ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಿತ್ತ ಸಚಿವೆ ಘೋಷಿಸಿದರು.
ಜಲ ಸಾರಿಗೆ ವಿಸ್ತರಣೆಯಿಂದ ವ್ಯಾಪಾರ ಮತ್ತು ಸಾರಿಗೆ ವೆಚ್ಚ ಕಡಿಮೆಯಾಗುವ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.

ಬಜೆಟ್ 2026 ರ ಮತ್ತೊಂದು ಪ್ರಮುಖ ಘೋಷಣೆ ಎಂದರೆ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆ. ದೇಶದ ಪ್ರಮುಖ ಏಳು ನಗರಗಳನ್ನು ಜೋಡಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಣಾಸಿ ಮತ್ತು ವಾರಣಾಸಿ–ಸಿಲಿಗುರಿ ಮಾರ್ಗಗಳಲ್ಲಿ ಹೈ ಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.




