Tirupati : ನಿತ್ಯ ಲಕ್ಷಾಂತರ ಭಕ್ತರು ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ಗಂಟೆಗಟ್ಟಲೆ ಕಾಯುತ್ತಾ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಆದರೆ ಈ ಒಂದು ದಿನದಂದು ತಿರುಮಲ ದೇವಸ್ಥಾನ ಮುಚ್ಚಲಿದೆ.

Tirupati : ವರ್ಷದಲ್ಲಿ ಬಹಳ ಅಪರೂಪಕ್ಕೆ ಮಾತ್ರ ಮುಚ್ಚಲಾಗುವ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಮಾರ್ಚ್ 3 ರಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕೆಲ ಗಂಟೆಗಳ ಕಾಲ ಬಂದ್ ಆಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಆಡಳಿತ ಮಂಡಳಿ ಅಧಿಕೃತವಾಗಿ ಪ್ರಕಟಿಸಿದೆ.
ಚಂದ್ರಗ್ರಹಣ ಹಿನ್ನೆಲೆಯಲ್ಲಿ ಟಿಟಿಡಿ ಅಧಿಕೃತ ಘೋಷಣೆ
ಟಿಟಿಡಿ ಮಾಹಿತಿ ಪ್ರಕಾರ, ಮಾರ್ಚ್ 3 ರಂದು ಚಂದ್ರಗ್ರಹಣ ಮಧ್ಯಾಹ್ನ 3:20ಕ್ಕೆ ಆರಂಭವಾಗಿ ಸಂಜೆ 6:45ಕ್ಕೆ ಕೊನೆಗೊಳ್ಳಲಿದೆ. ಗ್ರಹಣದ ವೇಳೆ ದೇವಾಲಯಗಳನ್ನು ಮುಚ್ಚುವುದು ಸಂಪ್ರದಾಯವಾಗಿರುವುದರಿಂದ, ಗ್ರಹಣಕ್ಕೆ ಆರು ಗಂಟೆಗಳ ಮೊದಲು ಶ್ರೀವಾರಿ ದೇವಸ್ಥಾನವನ್ನು ಮುಚ್ಚಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಾರ್ಚ್ 3 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7:30 ಗಂಟೆಯವರೆಗೆ ತಿರುಮಲ ಶ್ರೀವೆಂಕಟೇಶ್ವರ ದೇವಸ್ಥಾನವನ್ನು ಮುಚ್ಚಲಾಗುವುದು. ಸಂಜೆ 7:30 ಬಳಿಕ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದ್ದು, ಶುದ್ಧೀಕರಣ ಮತ್ತು ಪುಣ್ಯಾಹವಾಚನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ರಾತ್ರಿ 8:30ರಿಂದ ಭಕ್ತರಿಗೆ ಮರುದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ : ತಿರುಪತಿ ಗೋವಿಂದರಾಜ ಸ್ವಾಮಿ ದೇಗುಲದಲ್ಲಿ ಕುಡುಕನಿಂದ ಅವಾಂತರ
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಅಷ್ಟದಳ ಪಾದಪದ್ಮಾರಾಧನೆ, ಕಲ್ಯಾಣೋತ್ಸವ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ ಹಾಗೂ ಸಹಸ್ರದೀಪಾಲಂಕಾರ ಸೇವೆಗಳನ್ನು ಟಿಟಿಡಿ ರದ್ದುಗೊಳಿಸಿದೆ. ಜೊತೆಗೆ, ಮಾರ್ಚ್ 3 ರಂದು 300 ರೂ ವಿಶೇಷ ದರ್ಶನ ಟಿಕೆಟ್ಗಳನ್ನೂ ರದ್ದುಗೊಳಿಸಲಾಗಿದೆ.

ನಿತ್ಯ ಲಕ್ಷಾಂತರ ಭಕ್ತರು ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ಗಂಟೆಗಟ್ಟಲೆ ಕಾಯುತ್ತಾ ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಹೀಗಾಗಿ ಮಾರ್ಚ್ 3 ರಂದು ತಿರುಮಲಕ್ಕೆ ಭೇಟಿ ನೀಡಲು ಯೋಜನೆ ಮಾಡಿಕೊಂಡಿರುವ ಭಕ್ತರು ಈ ಮಾಹಿತಿ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಟಿಟಿಡಿ ಮನವಿ ಮಾಡಿದೆ.
MUST WATCH : ಸಿದ್ದಗಂಗಾ ಮಠಕ್ಕೆ ನೀರಿನ ಆತಂಕ ದೂರ ಆಕ್ರೋಶ, ಟೀಕೆ ಬಳಿಕ ಎಚ್ಚೆತ್ತ ಸರ್ಕಾರ




