WPL 2026 : RCB ವಿರುದ್ಧ ಮಂಡಿಯೂರಿದ ಯುಪಿ ವಾರಿಯರ್ಸ್: ಸ್ಮೃತಿ ಮಂಧಾನ ಬಳಗ ನೇರ ಫೈನಲ್ ಪ್ರವೇಶ.

ಗ್ರೇಸ್ ಹ್ಯಾರಿಸ್ ಅವರ ಅದ್ಭುತ ಆಲ್ರೌಂಡ್ ಪ್ರದರ್ಶನ ಹಾಗೂ ನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ತನ್ನ ಪಾಲಿನ ಕೊನೆಯ ಲೀಗ್ ಪಂದ್ಯವನ್ನಾಡಿದ ಆರ್ಸಿಬಿ ವಾರಿಯರ್ಸ್ ವಿರುದ್ಧ ಅದ್ಭುತ ಜಯದೊಂದಿಗೆ WPL ಇತಿಹಾಸದಲ್ಲಿ ಫಸ್ಟ್ ಟೈಮ್ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ.
RCB ವಿರುದ್ಧ ಮಂಡಿಯೂರಿದ ಯುಪಿ ವಾರಿಯರ್ಸ್
ಕೊಟಾಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 143 ರನ್ಗಳಿಗೆ ಸೀಮಿತವಾಯಿತು. ಗುರಿ ಬೆನ್ನಟ್ಟಿದ ಆರ್ಸಿಬಿ ಕೇವಲ 13.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ ಸುಲಭ ಜಯ ದಾಖಲಿಸಿತು.

ಪಂದ್ಯದ ʻಕ್ಲಾಕ್ʼ ಬದಲಿಸಿದ ಕ್ಲರ್ಕ್!
ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ದೀಪ್ತಿ ಶರ್ಮಾ ಉತ್ತಮ ಆರಂಭ ನೀಡಿದರು.
ಪವರ್ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಜೋಡಿ 50 ರನ್ ಸೇರಿಸಿತು. ಆದರೆ 9ನೇ ಓವರ್ನಲ್ಲಿ ನಾಡಿನ್ ಡಿ ಕ್ಲರ್ಕ್ ಮೊದಲ ಎಸೆತದಲ್ಲೇ ಲ್ಯಾನಿಂಗ್ ವಿಕೆಟ್ ಪಡೆದರು. ಅದೇ ಓವರ್ನಲ್ಲಿ ಜೋನ್ಸ್ ವಿಕೆಟ್ ಕೂಡ ಉರುಳಿದ ಪರಿಣಾಮ ಪಂದ್ಯದ ಗತಿ ಸಂಪೂರ್ಣ ಬದಲಾಗಿದೆ.
ಉಳಿದ ಬ್ಯಾಟರ್ಗಳು ನಿರಾಶೆ
ಅಂತಿಮ ಓವರ್ಗಳಲ್ಲಿ ಗ್ರೇಸ್ ಹ್ಯಾರಿಸ್ (2 ವಿಕೆಟ್), ಲೂರೆನ್ ಬೆಲ್ ಹಾಗೂ ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದು ವಾರಿಯರ್ಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.
ಬ್ಯಾಟಿಂಗ್ನಲ್ಲಿ ದೀಪ್ತಿ ಶರ್ಮಾ 55 ರನ್ ಹಾಗೂ ಮೆಗ್ ಲ್ಯಾನಿಂಗ್ 41 ರನ್ ಗಳಿಸಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟರ್ಗಳು ನಿರಾಶೆ ಮೂಡಿಸಿದರು.

ರುಬ್ಬಿದ ಗ್ರೇಸ್ ಹ್ಯಾರಿಸ್
ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ಗ್ರೇಸ್ ಹ್ಯಾರಿಸ್ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. 37 ಎಸೆತಗಳಲ್ಲಿ 75 ರನ್ (13 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ನಾಯಕಿ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 54 ರನ್ (8 ಬೌಂಡರಿ, 2 ಸಿಕ್ಸರ್) ಗಳಿಸಿ ಮಿಂಚಿದರು. ಜಾರ್ಜಿಯಾ ವೋಲ್ 16 ರನ್ ಸೇರಿಸಿದರು.
ಸ್ಮೃತಿ ಮಂಧಾನ ಬಳಗ ನೇರ ಫೈನಲ್ ಪ್ರವೇಶ
ಇನ್ನು ಈ ಭರ್ಜರಿ ಗೆಲುವಿನೊಂದಿಗೆ ಆರ್ಸಿಬಿ (RCB) ತಂಡ ನೇರವಾಗಿ ಫೈನಲ್ ಪ್ರವೇಶಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.





