27 ವರ್ಷಗಳ ನಾಸಾ ಜರ್ನಿಗೆ Sunita Williams ಗುಡ್ಬೈ.

ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ. 2025ರ ಡಿಸೆಂಬರ್ 27ರಂದು ಸುನಿತಾ ವಿಲಿಯಮ್ಸ್ ಅವರು ಅಧಿಕೃತವಾಗಿ ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಪ್ರಕಟಿಸಿದೆ. ಇದರೊಂದಿಗೆ 27 ವರ್ಷಗಳ ಸುದೀರ್ಘ ಹಾಗೂ ಐತಿಹಾಸಿಕ ಸೇವೆಗೆ ಅವರು ಗುಡ್ಬೈ ಹೇಳಿದ್ದಾರೆ.
ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗೆ ಕೃತಜ್ಞತೆ
ಈ ಕುರಿತು ಮಾತನಾಡಿದ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್ಮನ್, “ಸುನಿತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಹಾರಾಟದ ನಿಜವಾದ ಪ್ರವರ್ತಕಿ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಗಳು ಅಮೂಲ್ಯ. ಚಂದ್ರ ಮತ್ತು ಮಂಗಳ ಗ್ರಹದತ್ತ ನಮ್ಮ ಪ್ರಯಾಣಕ್ಕೆ ಅವರ ಯೋಜನೆಗಳು ಭದ್ರ ಅಡಿಪಾಯವಾಗಿವೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಶಾಶ್ವತ ಪ್ರೇರಣೆ” ಎಂದು ಶ್ಲಾಘಿಸಿದರು. ನಾಸಾ ಹಾಗೂ ರಾಷ್ಟ್ರಕ್ಕೆ ಅವರು ಸಲ್ಲಿಸಿದ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿದರು.

9 ಬಾಹ್ಯಾಕಾಶ ನಡಿಗೆ
1998ರಲ್ಲಿ ನಾಸಾಗೆ ಆಯ್ಕೆಯಾದ Sunita Williams ಅವರು ಮೂರು ಬಾಹ್ಯಾಕಾಶ ಮಿಷನ್ಗಳಲ್ಲಿ ಒಟ್ಟು 608 ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಗಗನಯಾತ್ರಿ ಬುಚ್ ವಿಲ್ಮೋರ್ ಜೊತೆ 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದಿದ್ದು, ಇದು ಅತ್ಯಂತ ಸುದೀರ್ಘ ಬಾಹ್ಯಾಕಾಶ ಯಾನಗಳಲ್ಲಿ ಒಂದಾಗಿದೆ. ಕೇವಲ 8 ದಿನಗಳ ಮಿಷನ್ಗೆ ತೆರಳಿದ್ದ ಅವರು ತಾಂತ್ರಿಕ ಕಾರಣಗಳಿಂದ 286 ದಿನಗಳ ಕಾಲ ಬಾಹ್ಯಾಕಾಶದಲ್ಲೇ ಉಳಿಯಬೇಕಾಯಿತು.
ಇದನ್ನು ಓದಿ : ಮಹಿಳಾ ಇನ್ಫ್ಲುಯೆನ್ಸರ್ಗೆ ಹರಿಯಾಣದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ
ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ
ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ವಿಲಿಯಮ್ಸ್, 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸಿ, ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ದಾಖಲೆ ನಿರ್ಮಿಸಿದರು. ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆ ಅವಧಿಯಲ್ಲಿ ಒಟ್ಟು 12,13,47,491 ಮೈಲುಗಳಷ್ಟು ಪ್ರಯಾಣಿಸಿದ್ದರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿಯೂ ಸೇವೆ
1965ರ ಸೆಪ್ಟೆಂಬರ್ 19ರಂದು ಓಹಿಯೋ ರಾಜ್ಯದ ಯೂಕ್ಲಿಡ್ನಲ್ಲಿ ಜನಿಸಿದ ಸುನಿತಾ ವಿಲಿಯಮ್ಸ್, ಗುಜರಾತ್ ಮೂಲದ ನರಶಸ್ತ್ರಚಿಕಿತ್ಸಕ ದೀಪಕ್ ಪಾಂಡ್ಯ ಹಾಗೂ ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಗಳ ಪುತ್ರಿ. 2006ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶ ನಡಿಗೆ ನಡೆಸಿದ ಅವರು, 2012ರ ಜುಲೈನಲ್ಲಿ ಎರಡನೇ ಮಿಷನ್ನಲ್ಲಿ ಕಝಾಕಿಸ್ತಾನ್ನಿಂದ ಎಕ್ಸ್ಪೆಡಿಶನ್ 32/33ರ ಭಾಗವಾಗಿ ತೆರಳಿದ್ದರು. ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು.
8 ದಿನಗಳ ಕಾರ್ಯಾಚರಣೆ
2024ರ ಜೂನ್ನಲ್ಲಿ ಬೋಯಿಂಗ್ನ ಸ್ಟಾರ್ಲೈನರ್ ಮೂಲಕ ನಡೆದ ಮಿಷನ್ ಅವರ ಕೊನೆಯ ಬಾಹ್ಯಾಕಾಶ ಪ್ರಯಾಣವಾಗಿದ್ದು, 8 ದಿನಗಳ ಕಾರ್ಯಾಚರಣೆಗೆ ತೆರಳಿದ್ದ ಅವರು 2025ರ ಮಾರ್ಚ್ನಲ್ಲಿ ಭೂಮಿಗೆ ಮರಳಿದ್ದರು.

ಇದನ್ನು ನೋಡಿ : TUMAKUR | ಗೌರಿಶಂಕರ್ ಕೈ ಸೇರಿದ ಬಳಿಕ ಕ್ಷೇತ್ರಕ್ಕೆ ದಳಪತಿ ಎಂಟ್ರಿ- ಹೆಚ್ಡಿಕೆ ಸ್ವಾಗತಕ್ಕೆ ಸಜ್ಜಾದ ಕಾರ್ಯಕರ್ತರು




