Karnataka Weather : ಕರ್ನಾಟಕದಲ್ಲಿ ಈ ವರ್ಷ ಬೇಸಿಗೆಯ ತೀವ್ರತೆ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Karnataka Weather : ಡಿಸೆಂಬರ್ ತಿಂಗಳಲ್ಲಿ ದಾಖಲೆಯ ಮಟ್ಟದ ಚಳಿ ಕಂಡುಬಂದಿದ್ದರಿಂದ, ಅದರ ಪರಿಣಾಮವಾಗಿ ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗಲಿದೆ ಎಂಬುದು ತಜ್ಞರ ಲೆಕ್ಕಾಚಾರ.
ಜನವರಿ ಕೊನೆಗೆ ಚಳಿ ಅಂತ್ಯ; ಫೆಬ್ರವರಿಯಿಂದಲೇ ಬೇಸಿಗೆ
ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ಅವರ ಮಾಹಿತಿ ಪ್ರಕಾರ, ಈ ಬಾರಿ ಜನವರಿ ಅಂತ್ಯದ ವೇಳೆಗೆ ಚಳಿಯ ಪ್ರಭಾವ ಕುಗ್ಗಲಿದೆ ಫೆಬ್ರವರಿಯಿಂದಲೇ ಬಿಸಿಲು ಆರಂಭವಾಗಲಿದೆ.ವಾಡಿಕೆಗಿಂತ ಹೆಚ್ಚು ಉಷ್ಣತೆ ದಾಖಲಾಗುವ ಸಾಧ್ಯತೆ ಇದೆ
ಸಾಮಾನ್ಯವಾಗಿ ಫೆಬ್ರವರಿಯವರೆಗೂ ಚಳಿ ಇರುತ್ತಿತ್ತು. ಆದರೆ ಈ ಬಾರಿ ಬೇಸಿಗೆ ಮುಂಚಿತವಾಗಿಯೇ ಆರಂಭವಾಗುತ್ತಿದೆ.
ಬೆಂಗಳೂರಿನಲ್ಲಿ ಈಗಲೇ ಬೇಸಿಗೆಯ ಝಳ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಬೆಳಗ್ಗೆ 10 ಗಂಟೆಯಿಂದಲೇ ಮೈ ಸುಡುವ ಬಿಸಿಲು ಕಾಣಿಸುತ್ತಿದೆ.
ಇದಕ್ಕೆ ಜೊತೆಗೆ, ದಟ್ಟ ಮಂಜು ,ಹೆಚ್ಚಿದ ಧೂಳು , ತೇವಾಂಶ ಕಡಿಮೆಯಾದ ಒಣ ವಾತಾವರಣ ಇವೆಲ್ಲ ಕಾರಣಗಳಿಂದಾಗಿ ಜನರಿಗೆ ಅಸ್ವಸ್ಥತೆ ಹೆಚ್ಚುತ್ತಿದೆ.
ಶುಷ್ಕ ವಾತಾವರಣದಿಂದ ಆರೋಗ್ಯ ಸಮಸ್ಯೆಗಳು
ಒಣಹವೆ ಮತ್ತು ಬಿಸಿಲಿನ ಪ್ರಖರತೆ ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ವೈದ್ಯರ ಪ್ರಕಾರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗಳು:
- ಚರ್ಮ ಸುಡುವುದು ಮತ್ತು ಚರ್ಮದ ಅಲರ್ಜಿಗಳು
- ಶ್ವಾಸಕೋಶ ತೊಂದರೆ
- ಉಷ್ಣದ ಕೆಮ್ಮು ಮತ್ತು ಒಣ ಕೆಮ್ಮು
- ತಲೆಸುತ್ತು, ಅಂಗೈ-ಅಂಗಾಲು ಉರಿ
- ಉರಿ ಮೂತ್ರ, ಮಲಬದ್ಧತೆ
ಬೇಸಿಗೆ ಮುಂದುವರಿದಂತೆ ಈ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೆಚ್ಚಿದ ಧೂಳು; ಒಣ ಕೆಮ್ಮು ಹೆಚ್ಚಳ
ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗಿರುವುದರಿಂದ ಧೂಳಿನ ಪ್ರಮಾಣ ಹೆಚ್ಚಾಗಿದೆ.
ಖಾಲಿ ಜಾಗಗಳು, ಮರ-ಗಿಡಗಳ ಎಲೆಗಳ ಮೇಲೆ ಧೂಳು ಜಮಾಯಿಸುತ್ತಿದ್ದು, ಇದರಿಂದ ಒಣ ಕೆಮ್ಮು ಹೆಚ್ಚುತ್ತಿದೆ.
ಇದೇ ವೇಳೆ, ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ರಸ್ತೆ ಅಗೆದು ಪೈಪ್ಲೈನ್ ಅಳವಡಿಸುವ ಕಾಮಗಾರಿಗಳು ನಡೆಯುತ್ತಿರುವುದರಿಂದ ದೂಳಿನ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ತಾಪಮಾನ 35 ಡಿಗ್ರಿ ಸೆ. ದಾಟುವ ಸಾಧ್ಯತೆ
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಫೆಬ್ರವರಿಯಲ್ಲೇ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ, ಮಾರ್ಚ್–ಏಪ್ರಿಲ್ ತಿಂಗಳಲ್ಲಿ ತಾಪಮಾನ ತೀವ್ರವಾಗಿರಲಿದೆ, ಪ್ರತಿ ವರ್ಷ ತಾಪಮಾನ ಏರುತ್ತಿರುವ ಪ್ರವೃತ್ತಿ ಈ ಬಾರಿಯೂ ಮುಂದುವರಿಯಲಿದೆ
ಸಾರ್ವಜನಿಕರಿಗೆ ಸಲಹೆ
- ಸಾಕಷ್ಟು ನೀರು ಕುಡಿಯಿರಿ
- ಬಿಸಿಲಿನಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ
- ಧೂಳಿನಿಂದ ರಕ್ಷಣೆಗಾಗಿ ಮಾಸ್ಕ್ ಬಳಸಿ
- ಆರೋಗ್ಯ ಸಮಸ್ಯೆ ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ




