Pavagada ದಲ್ಲಿ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದ ಕಾರಣ ರೋಗಿಯೊಬ್ಬರು ಚಿಕಿತ್ಸೆ ಸಿಗದೆ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.

Pavagada ದ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಆರೋಗ್ಯ ವ್ಯವಸ್ಥೆಯ ಲೋಪವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಉಸಿರಾಟದ ತೊಂದರೆ ಮತ್ತು ಬಿಪಿ ಕಡಿಮೆಯಿಂದ ಬಳಲುತ್ತಿದ್ದ ಸೈಯ್ಯದ್ ಅಕ್ರಮ್ (42) ಅವರನ್ನು ಜ.16ರಂದು ಅವರ ಸಹೋದರ ನಯಾಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು.
ವೈದ್ಯರು ಪರಿಶೀಲಿಸಿ ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು.
1 ಗಂಟೆ ಕಾಯ್ದರೂ ಸಿಗದ ಆ್ಯಂಬುಲೆನ್ಸ್
ಆದರೆ ರೋಗಿಯನ್ನು ಕರೆದೊಯ್ಯಲು ಸುಮಾರು ಒಂದು ಗಂಟೆ ಕಾಲ ಕಾದರೂ ಆ್ಯಂಬುಲೆನ್ಸ್ ಲಭ್ಯವಾಗಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ದರೂ ಚಾಲಕ ಲಭ್ಯವಿರಲಿಲ್ಲ ಎನ್ನಲಾಗಿದೆ. ಈ ಅವಧಿಯಲ್ಲಿ ರೋಗಿಯ ಸ್ಥಿತಿ ಗಂಭೀರಗೊಂಡು, ಸಮಯಕ್ಕೆ ಚಿಕಿತ್ಸೆ ಸಿಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ನಂತರ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮಗಾದ ಅನ್ಯಾಯ ಮತ್ಯಾರಿಗೂ ಆಗಬಾರದು” ಎಂದು ಕುಟುಂಬ ಕಣ್ಣೀರಿಟ್ಟಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಒಂದೂವರೆ ಎಕರೆ ಜಮೀನು ನೀಡಿದ್ದ ತಂದೆ
ಈ ಘಟನೆಯಲ್ಲಿ ಮನಕಲಕುವ ಅಂಶವೆಂದರೆ, ಈ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮೃತ ಸೈಯ್ಯದ್ ಅಕ್ರಮ್ ಅವರ ತಂದೆಯೇ ಒಂದೂವರೆ ಎಕರೆ ಮೌಲ್ಯದ ಭೂಮಿಯನ್ನು ದಾನ ಮಾಡಿದ್ದರು. ಜನರ ಜೀವ ಉಳಿಸಲು ಆಸ್ಪತ್ರೆ ಅಗತ್ಯವೆಂದು ಅರಿತು ಅವರು ಕೋಟ್ಯಂತರ ಮೌಲ್ಯದ ಜಮೀನನ್ನು ನೀಡಿದ್ದಾರೆ.
ಆದರೆ ಅದೇ ಜಾಗದಲ್ಲೇ ಇಂದು ಅವರ ಮಗ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಭಾರೀ ನೋವನ್ನುಂಟುಮಾಡಿದೆ.
ಮೃತರ ಸಹೋದರ ನಯಾಜ್ ಮಾತನಾಡಿ, “ನನ್ನ ಸಹೋದರನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ಈ ಆಸ್ಪತ್ರೆಗೆ ತಕ್ಷಣವೇ ತಜ್ಞ ವೈದ್ಯರು, ಅಗತ್ಯ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪಾವಗಡದ ಈ ದುರ್ಘಟನೆ, ಗ್ರಾಮೀಣ ಆರೋಗ್ಯ ಕೇಂದ್ರಗಳಲ್ಲಿನ ಮೂಲ ಸೌಲಭ್ಯಗಳ ಕೊರತೆಯನ್ನು ಸ್ಪಷ್ಟಪಡಿಸಿದೆ. ಸಮಯಕ್ಕೆ ಆ್ಯಂಬುಲೆನ್ಸ್ ಹಾಗೂ ಚಿಕಿತ್ಸೆ ಲಭ್ಯವಾಗಿದ್ದರೆ ಒಂದು ಜೀವ ಉಳಿಯಬಹುದಿತ್ತು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ.




