ʻBigg Bossʼ ಶೋ ಫಿನಾಲೆ ತಲುಪಿದರೂ ತಪ್ಪುತ್ತಿಲ್ಲ ಸಂಕಷ್ಟ; ಸುದೀಪ್ ಹೇಳಿದ ಆ ಒಂದು ಮಾತಿನ ಬಗ್ಗೆ ಸಿಗಲಿದೆಯಾ ಸ್ಪಷ್ಟೀಕರಣ?

ಈ ಬಾರಿಯ ಕನ್ನಡ ಬಿಗ್ ಬಾಸ್ 12 ಶೋನಲ್ಲಿ ಎದುರಾಗಿರುವ ಸಂಕಷ್ಟಗಳು ಒಂದೊಂದಲ್ಲ. ಶೋ ಆರಂಭದಲ್ಲೇ ರೂಲ್ಸ್ ಬ್ರೇಕ್ ಕಾರಣಕ್ಕೆ ಒಂದು ದಿನ ಬಿಗ್ ಬಾಸ್ ಮನೆಗೆ ಬೀಗವನ್ನೇ ಹಾಕಲಾಗಿತ್ತು. ಇದೀಗ ಶೋ ಫಿನಾಲೆ ತಲುಪಿದೆ. ಆದರೂ ಸಂಕಷ್ಟಗಳು ಮಾತ್ರ ದೂರವಾಗುವಂತೆ ಕಾಣುತ್ತಿಲ್ಲ. ಕಳೆದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತು ಈಗ ಬಿಗ್ ಬಾಸ್ಗೆ ಅರಣ್ಯ ಇಲಾಖೆಯಿಂದ ನೋಟಿಸ್ ಸಿಗುವಂತೆ ಮಾಡಿದೆ.
Bigg Boss – ಏನಿದು ಹೊಸ ಸಂಕಷ್ಟ?
Bigg Boss ಸೀಸನ್ 12 ರ ವಾರಾಂತ್ಯದ ಸಂಚಿಕೆಯಲ್ಲಿ ಸುದೀಪ್ ಅವರು, “ರಣಹದ್ದು ಹೊಂಚು ಹಾಕಿ ಸಂಚು ಮಾಡಿ ಸರಿಯಾದ ಸಮಯದಲ್ಲಿ ಲಬಕ್ ಅಂತ ಹಿಡಿಯುತ್ತದೆ” ಎಂದು ಹೇಳಿದ್ದರು.
ಈ ಮಾತುಗಳು ರಣಹದ್ದುಗಳ ಸ್ವಭಾವವನ್ನು ತಪ್ಪಾಗಿ ಬಿಂಬಿಸುತ್ತವೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು ಅರಣ್ಯ ಇಲಾಖೆಗೆ ದೂರು ನೀಡಿತ್ತು. ಇದೀಗ ಈ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ‘ಬಿಗ್ ಬಾಸ್’ ಟೀಮ್ಗೆ ಅರಣ್ಯ ಇಲಾಖೆಯಿಂದ ನೋಟೀಸ್ ಜಾರಿ ಆಗಿದೆ.
ಇದನ್ನು ಓದಿ : Dina Bhavishya|ದಿನ ಭವಿಷ್ಯ 18 ಜನವರಿ 2026

ದೂರಿನಲ್ಲಿ ಹೇಳಿದ್ದೇನು?
“ರಣಹದ್ದು ಸ್ವಭಾವದ ಕುರಿತು ಕಿಚ್ಚ ಸುದೀಪ್ ಅವರು ತಪ್ಪು ಮಾಹಿತಿ ನೀಡಿದ್ದಾರೆ. ರಣಹದ್ದುಗಳು ಸತ್ತ ಜೀವಿಗಳ ಶವ ತಿಂದು ಪರಿಸರ ಸ್ವಚ್ಛಗೊಳಿಸುತ್ತದೆ. ಆ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ಪ್ರಮುಖ ಪಾತ್ರ ವಹಿಸುತ್ತವೆ.
ನೋಟಿಸ್ ಜಾರಿ
ಲಕ್ಷಾಂತರ ಜನ ನೋಡುವ ಕಾರ್ಯಕ್ರಮದಲ್ಲಿ ತಪ್ಪು ಮಾಹಿತಿಯಿಂದ ರಣಹದ್ದುಗಳ ಸಂರಕ್ಷಣೆಗೆ ಹಿನ್ನಡೆ ಆಗಲಿದೆ. ಈ ಬಗ್ಗೆ ಸುದೀಪ್ ಅವರು ಸ್ಪಷ್ಟೀಕರಣ ನೀಡಬೇಕು ಮತ್ತು ತಪ್ಪು ಗ್ರಹಿಕೆ ದೂರ ಮಾಡಲು ಕಾರ್ಯಕ್ರಮ ಆಯೋಜಕರಿಗೆ ಸೂಚನೆ ನೀಡಬೇಕು” ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದೀಗ ಫಿನಾಲೆ ಹೊತ್ತಿಗೆ ಆ ಬಗ್ಗೆ ನೋಟಿಸ್ ಜಾರಿ ಆಗಿದೆ.
ಸ್ಪಷ್ಟೀಕರಣ ನೀಡಬೇಕು
“ಪರಿಸರ ಸಮತೋಲನ ಕಾಪಾಡುವ ರಣಹದ್ದುಗಳ ಕುರಿತು ಸರಿಯಾದ ಮಾಹಿತಿ ಮುಂದಿನ ಪೀಳಿಗೆಗೆ ತಲುಪಿಸುವುದು ಅಗತ್ಯ. ಆದ್ದರಿಂದ ಮುಂದಿನ ಸಂಚಿಕೆಯಲ್ಲಿ ರಣಹದ್ದುಗಳ ಸ್ವಭಾವ ಕುರಿತು ಸ್ಪಷ್ಟೀಕರಣ ನೀಡಬೇಕು” ಎಂದು ನೋಟೀಸ್ನಲ್ಲಿ ತಿಳಿಸಲಾಗಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ತಂಡ ಅಥವಾ ಸುದೀಪ್ ಅವರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನು ನೋಡಿ : KSRTC BUS ಬಸ್ ದುರಂತ ತಡೆಯಲು ಸರ್ಕಾರದಿಂದ ಹೊಸ ಪ್ಲ್ಯಾನ್




