Mysuru : ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲೇ ಮಹಿಳಾ ಸರ್ಕಾರಿ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. Mysuru ಜಿಲ್ಲೆಯ ಗುಡಮಾದನಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 31ರಂದು ನಡೆದ ಈ ಘಟನೆಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಧಿಕಾರಿಗಳಿಗೆ ನಿಂದನೆ
ಗುಡಮಾದನಹಳ್ಳಿಯಲ್ಲಿ ನಿಮ್ಹಾನ್ಸ್ ಮಾದರಿಯ ಹೊಸ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಒಟ್ಟು 20 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಸರ್ವೆ ನಂ. 8ರಲ್ಲಿ 5 ಎಕರೆ 5 ಗುಂಟೆ, ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಭೂಮಿಯನ್ನು ಆಸ್ಪತ್ರೆ ಯೋಜನೆಗಾಗಿ ಗುರುತಿಸಲಾಗಿದೆ.
ಇದನ್ನು ಓದಿ : ತುಮಕೂರಿಗೆ ಬರಲಿದೆ ಹಾಕಿ ಸ್ಟೇಡಿಯಂ ಹಾಗೂ ಸ್ವಿಮ್ಮಿಂಗ್ ಫೂಲ್
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದ್ದು, ಜಾಗ ಗುರುತಿಸುವ ಹಾಗೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಜಮೀನು ಪರಿಶೀಲನೆಗೆ ತೆರಳಿದ್ದರು.

ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ
ಈ ವೇಳೆ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. “ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಯಬೇಕು” ಎಂದು ಬೆದರಿಕೆ ಹಾಕಿರುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
ವಿಡಿಯೋ ಡಿಲೀಟ್ ಮಾಡಲು ಯತ್ನ
ವಿಡಿಯೋ ಚಿತ್ರೀಕರಣವಾಗುತ್ತಿರುವುದನ್ನು ಗಮನಿಸಿದ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎನ್ನಲಾಗಿದೆ. ನಂತರ ಈ ದೃಶ್ಯಗಳು ವೈರಲ್ ಆಗಿದ್ದು, ಸರ್ಕಾರಿ ಅಧಿಕಾರಿಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
FIR ದಾಖಲು
ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ FIR ದಾಖಲಾಗಿದೆ.

ಇದನ್ನು ನೋಡಿ : ಕಾರವಾರ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಆರೋಪಿಯಿಂದ ದೌರ್ಜನ್ಯ?




