Tumakuru ಶೈಕ್ಷಣಿಕ ನಗರಿ, ಸ್ಮಾರ್ಟ್ ಸಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರು, ಇದೀಗ ರಾಜ್ಯಮಟ್ಟದ ಕ್ರೀಡೋತ್ಸವಕ್ಕೆ ಸಾಕ್ಷಿಯಾಗಿದೆ.

Tumakuru ನಗರದಲ್ಲಿ ಅಂತರಾಷ್ಟ್ರೀಯ ಸ್ಟೇಡಿಯಂ ನಿರ್ಮಾಣದ ಚರ್ಚೆಗಳು ಜೋರಾಗಿರುವ ನಡುವೆಯೇ, ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ.ಜನವರಿ 16ರಿಂದ 22ರವರೆಗೆ ಈ ಮಹತ್ವದ ಕ್ರೀಡಾಕೂಟ ನಡೆಯಲಿದೆ.
ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ಕ್ರೀಡೋತ್ಸವದ ಸಂಭ್ರಮ
ತುಮಕೂರು ನಗರದ ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಕರ್ನಾಟಕ ಒಲಂಪಿಕ್ ಸಂಸ್ಥೆ ಇವರ ಸಹಯೋಗದಲ್ಲಿ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.
ಕ್ರೀಡೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹಬ್ಬದ ವಾತಾವರಣ ಕಂಡುಬಂದಿತು.

ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿದ ಸಿಎಂ
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರೀಡಾ ಜ್ಯೋತಿ ಬೆಳಗಿಸಿ ,ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕ್ರೀಡಾಪಟುಗಳು ತುಮಕೂರಿಗೆ ಆಗಮಿಸಿದ್ದಾರೆ.
ಪದಕ ಗೆಲ್ಲುವ ಉತ್ಸಾಹ ಮತ್ತು ರಾಜ್ಯಮಟ್ಟದ ಸಾಧನೆ ಮಾಡುವ ಕನಸಿನೊಂದಿಗೆ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಲಹೆ: “ಸೋಲು-ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ”
ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದರು ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಯೂ ಅಗತ್ಯ , ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ ಮತ್ತು ಸಂಘಟನಾ ಶಕ್ತಿ ಬೆಳೆಯುತ್ತದೆ.
ಕ್ರೀಡೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ, ಭಾಗವಹಿಸುವ ಮನೋಭಾವವೇ ಮುಖ್ಯ .ಸೋಲಲ್ಲೂ ನಗುವನ್ನು ಕಾಣುವವನೇ ನಿಜವಾದ ಕ್ರೀಡಾಪಟು
ತುಮಕೂರು ಜಿಲ್ಲೆಯಿಂದ ಹೆಚ್ಚು ಕ್ರೀಡಾಪಟುಗಳು ಹೊರಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಆಶಿಸಿದರು.

ಹಾಕಿ ಸ್ಟೇಡಿಯಂ ಮತ್ತು ಸ್ವಿಮ್ಮಿಂಗ್ ಪೂಲ್ಗೆ ಮನವಿ
ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಮಾತನಾಡಿ ಕ್ರೀಡಾಕೂಟಕ್ಕೆ ಎಲ್ಲರೂ ಗೆಲ್ಲುವ ಉದ್ದೇಶದಿಂದ ಬರುತ್ತಾರೆ, ಆದರೆ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಕ್ರೀಡಾಪಟುಗಳ ಭವಿಷ್ಯದ ದೃಷ್ಟಿಯಿಂದ ಸಿಎಂ ಸಾಕಷ್ಟು ಕೊಡುಗೆ ನೀಡಿದ್ದಾರೆ .
ತುಮಕೂರು ಜಿಲ್ಲೆಯಲ್ಲಿ ಹಾಕಿ ಸ್ಟೇಡಿಯಂ ಇಲ್ಲದ ಹಿನ್ನೆಲೆ, ಹಾಕಿ ಸ್ಟೇಡಿಯಂ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಿಎಂ ಬಳಿ ಮನವಿ ಮಾಡಿದರು.

ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಒಲಂಪಿಕ್ ಅಧ್ಯಕ್ಷ ಗೋವಿಂದ ರಾಜು , ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ , ಮಾಜಿ ಸಚಿವ ಕೆ.ಎನ್. ರಾಜಣ್ಣ ,ಶಾಸಕರು: ಸುರೇಶ್ ಗೌಡ, ಜ್ಯೋತಿ ಗಣೇಶ್, ಹೆಚ್.ವಿ. ವೆಂಕಟೇಶ್, ಷಡಕ್ಷರಿ, ಎಂ.ಟಿ. ಕೃಷ್ಣಪ್ಪ, ಟಿ.ಬಿ. ಜಯಚಂದ್ರ, ಎಸ್.ಆರ್. ಶ್ರೀನಿವಾಸ್ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.




