
BANGALORE : ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿಪಡಿಸಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಹೊಸ ನಿಯಮಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ ಈ ತೀರ್ಮಾನ ಕೈಗೊಂಡಿದ್ದು, ಮುಂದಿನ ವಿಚಾರಣೆಗೆ ದಿನಾಂಕವನ್ನು ಮುಂದೂಡಿದೆ.
ರಾಜ್ಯ ಸರ್ಕಾರ ಎಲ್ಲ ಭಾಷೆಯ ಚಲನಚಿತ್ರಗಳಿಗೆ ತೆರಿಗೆ ಹೊರತುಪಡಿಸಿ ₹200 ಗರಿಷ್ಠ ಟಿಕೆಟ್ ದರ ನಿಗದಿಪಡಿಸುವ ‘ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025’ ಅನ್ನು ಜಾರಿಗೆ ತಂದಿತ್ತು. ಆದರೆ ಈ ಆದೇಶದ ವಿರುದ್ಧ ಹೋಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್, ಕೀಸ್ಟೋನ್ ಎಂಟರ್ಟೈನ್ಮೆಂಟ್ ಹಾಗೂ ವಿ.ಕೆ. ಫಿಲ್ಮ್ಸ್ ಸೇರಿದಂತೆ ಹಲವರು ಕಾನೂನು ಶರಣು ಹೋಗಿದ್ದರು.
ಅರ್ಜಿದಾರರು, ಈ ನಿಯಮಗಳು ಚಿತ್ರರಂಗದ ಆರ್ಥಿಕತೆ ಹಾಗೂ ಸ್ವತಂತ್ರತೆಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿ ತೀರದವರೆಗೆ ಸರ್ಕಾರದ ಆದೇಶ ಜಾರಿಗೆ ಬಾರದಂತೆ ತಡೆ ನೀಡಬೇಕು ಎಂದು ಅವರು ಕೋರಿದ್ದರು. ಹೀಗಾಗಿ ಹೈಕೋರ್ಟ್ ಇದೀಗ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆ ನಿರೀಕ್ಷಿಸಲಾಗಿದೆ.




