Makara Sankranti ಯಂದು ಎಳ್ಳನ್ನೇ ಏಕೆ ಹಂಚುತ್ತಾರೆ ? ಎಳ್ಳಿನ ಹಬ್ಬದ ಹಿಂದಿರುವ ಪೌರಾಣಿಕ ಕಥೆ ಮತ್ತು ಮಹತ್ವ..

Makara Sankranti ಹಬ್ಬ ಬಂದೇ ಬಿಟ್ಟಿದೆ. ಉತ್ತರಾಯಣದ ಆರಂಭವನ್ನು ಸೂಚಿಸುವ ಈ ಹಬ್ಬವನ್ನು ಎಳ್ಳಿನ ಹಬ್ಬ ಎಂದೇ ಕರೆಯಲಾಗುತ್ತದೆ. ಮಕರ ಸಂಕ್ರಾಂತಿ ದಿನ ಎಳ್ಳು (Til / Thil) ವಿಶೇಷ ಸ್ಥಾನ ಪಡೆದಿದ್ದು, ಆರೋಗ್ಯದ ಜೊತೆಗೆ ಪೌರಾಣಿಕ ಹಾಗೂ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಹಾಗಾದರೆ ಸಂಕ್ರಾಂತಿ ದಿನ ಎಳ್ಳನ್ನೇ ಏಕೆ ಹಂಚುತ್ತಾರೆ? ಇದರ ಹಿಂದೆ ಇರುವ ಕಥೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಕರ ಸಂಕ್ರಾಂತಿ ಮತ್ತು ಎಳ್ಳಿನ ಮಹತ್ವ
ಮಕರ ಸಂಕ್ರಾಂತಿ (Makara Sankranti 2026) ದಿನ ಸೂರ್ಯ ಉತ್ತರಾಯಣಕ್ಕೆ ಪ್ರವೇಶಿಸುತ್ತಾನೆ. ಈ ದಿನ ಸೂರ್ಯನಿಗೆ ಹಾಗೂ ಶನಿ ದೇವರಿಗೆ ಪ್ರಿಯವಾದ ಎಳ್ಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಎಳ್ಳನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಸಂಪ್ರದಾಯ ಬಹಳ ಪುರಾತನವಾಗಿದೆ.

ಪುರಾಣಗಳ ಪ್ರಕಾರ, ತಾಯಿ ಛಾಯಾ ದೇವಿಯನ್ನು ಅವಮಾನಿಸಿದ ಕಾರಣ ಶನಿ ದೇವನು ತಂದೆ ಸೂರ್ಯ ದೇವನಿಗೆ ಕುಷ್ಠ ರೋಗ ಬರುವಂತೆ ಶಾಪ ನೀಡುತ್ತಾನೆ. ಇದರಿಂದ ಸೂರ್ಯನ ಕುಟುಂಬದಲ್ಲಿ ನೋವು ಉಂಟಾಗುತ್ತದೆ. ಕೋಪಗೊಂಡ ಸೂರ್ಯ ದೇವನು ಶನಿಯ ಮನೆಯನ್ನು ಸುಟ್ಟು ಹಾಕುತ್ತಾನೆ.
ಆ ಸಂದರ್ಭದಲ್ಲಿ ಶನಿ ದೇವನ ಬಳಿ ಉಳಿದಿದ್ದ ಏಕೈಕ ವಸ್ತು ಕಪ್ಪು ಎಳ್ಳು. ಅದನ್ನೇ ಶನಿ ದೇವನು ಸೂರ್ಯನಿಗೆ ಅರ್ಪಿಸುತ್ತಾನೆ. ಇದರಿಂದ ಪ್ರಸನ್ನನಾದ ಸೂರ್ಯ ದೇವನು, ಶನಿ ಮಕರ ರಾಶಿಗೆ ಪ್ರವೇಶಿಸಿದಾಗ ಅವನ ಸಂಪತ್ತು ವೃದ್ಧಿಯಾಗುತ್ತದೆ ಎಂದು ಆಶೀರ್ವದಿಸುತ್ತಾನೆ.
ಈ ಕಾರಣದಿಂದಲೇ ಸೂರ್ಯ ಮತ್ತು ಶನಿ ದೇವರಿಗೆ ಎಳ್ಳು ಅತ್ಯಂತ ಪ್ರಿಯ ಎನ್ನುವ ನಂಬಿಕೆ ಬಂದಿದೆ. ಹೀಗಾಗಿ ಮಕರ ಸಂಕ್ರಾಂತಿ ದಿನ ಎಳ್ಳಿನ ಬಳಕೆ ರೂಢಿಯಾಗಿದೆ.
ಎಳ್ಳು ಭಾರತದಲ್ಲಿ ಅತ್ಯಂತ ಪುರಾತನ ಎಣ್ಣೆಕಾಳು.
- ಕ್ರಿ.ಪೂ. 3500–3050ರ ಮಧ್ಯೆ ಎಳ್ಳಿನ ಬಳಕೆಯ ಕುರುಹುಗಳು ದೊರೆತಿವೆ
- ಸುಮಾರು 5500 ವರ್ಷಗಳ ಹಿಂದೆಯೇ ಭಾರತದಲ್ಲಿ ಎಳ್ಳನ್ನು ಬೆಳೆಸಲಾಗುತ್ತಿತ್ತು
- ಸಿಂಧೂ ನಾಗರಿಕತೆಯ ಕಾಲದಲ್ಲಿಯೇ ಎಳ್ಳಿನ ವ್ಯಾಪಾರ ನಡೆಯುತ್ತಿತ್ತು
- ಎಳ್ಳಿನಿಂದ ಎಣ್ಣೆ ತೆಗೆಯುವ ಪದ್ಧತಿ ಬಹಳ ಹಿಂದಿನಿಂದಲೇ ಇತ್ತು

ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳಿನ ಬಳಕೆ
ಮಕರ ಸಂಕ್ರಾಂತಿ ದಿನ ಎಳ್ಳನ್ನು ವಿವಿಧ ಧಾರ್ಮಿಕ ಆಚರಣೆಗಳಿಗೆ ಬಳಸಲಾಗುತ್ತದೆ:
- ಎಳ್ಳು ನೀರಿನಿಂದ ಸ್ನಾನ
- ಎಳ್ಳು ನೀರಿನಿಂದ ತರ್ಪಣ
- ಗೋವಿಗೆ ಎಳ್ಳು ದಾನ
- ಎಳ್ಳು–ಬೆಲ್ಲ–ಕೊಬ್ಬರಿ ಹಂಚಿಕೆ
- “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ” ಎಂದು ಶುಭಾಶಯ ವಿನಿಮಯ
- ಮಕ್ಕಳ ಮೇಲೆ ಎಳ್ಳು ಸುರಿಸುವುದು (ಬಾಲಾರಿಷ್ಟ ನಾಶವಾಗುತ್ತದೆ ಎಂಬ ನಂಬಿಕೆ)
- ಎಳ್ಳೆಣ್ಣೆಯ ದೀಪ ಹಚ್ಚುವುದು (ಆಯುಷ್ಯ, ಆರೋಗ್ಯ ವೃದ್ಧಿ ಎನ್ನುವ ನಂಬಿಕೆ)

ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ,
- ಕಪ್ಪು ಎಳ್ಳು ನಕಾರಾತ್ಮಕ ಶಕ್ತಿಯನ್ನು ತಟಸ್ಥಗೊಳಿಸುತ್ತದೆ
- ಶನಿ ಗ್ರಹವನ್ನು ಶಾಂತಗೊಳಿಸುವ ಶಕ್ತಿ ಹೊಂದಿದೆ
- ಪೂರ್ವಜರ ದೋಷ, ದುಷ್ಟ ದೃಷ್ಟಿ, ಆರ್ಥಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ
ಅದಕ್ಕಾಗಿಯೇ ದಾನ ಮತ್ತು ಧಾರ್ಮಿಕ ವಿಧಿಗಳಲ್ಲಿ ಕಪ್ಪು ಎಳ್ಳನ್ನು ಹೆಚ್ಚು ಬಳಸಲಾಗುತ್ತದೆ.
ಮಕರ ಸಂಕ್ರಾಂತಿ ದಿನ ಎಳ್ಳನ್ನು ಹಂಚುವುದು ಕೇವಲ ಸಂಪ್ರದಾಯವಲ್ಲ. ಇದಕ್ಕೆ ಪೌರಾಣಿಕ ಕಥೆ, ಇತಿಹಾಸ, ಆರೋಗ್ಯ ಪ್ರಯೋಜನ ಮತ್ತು ವಾಸ್ತು ನಂಬಿಕೆಗಳ ಬೆಂಬಲವಿದೆ. ಈ ಕಾರಣದಿಂದಲೇ ಮಕರ ಸಂಕ್ರಾಂತಿಯನ್ನು ಎಳ್ಳಿನ ಹಬ್ಬ ಎಂದು ಕರೆಯಲಾಗುತ್ತದೆ.




