Haveri ಯಲ್ಲಿ ವರದಕ್ಷಿಣೆ ಕಿರುಕುಳ ಆರೋಪ – ಎರಡು ತಿಂಗಳ ಗರ್ಭಿಣಿ ನವವಿವಾಹಿತೆ ಅನುಮಾನಾಸ್ಪದ ಸಾವು ,ಶಿಗ್ಗಾವಿಯಲ್ಲಿ ಹೃದಯವಿದ್ರಾವಕ ಘಟನೆ…

Haveri: ದೇಶದ ದೊಡ್ಡ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ಮಾನವೀಯತೆಯನ್ನು ಪ್ರಶ್ನಿಸಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ವರದಕ್ಷಿಣೆ ಕಿರುಕುಳ ಹಿನ್ನೆಲೆ ಎರಡು ತಿಂಗಳ ಗರ್ಭಿಣಿ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಸುನೀತಾ ದೊಡ್ಡಮನಿ (35) ಎಂದು ಗುರುತಿಸಲಾಗಿದೆ.
ಮದುವೆಯಾಗಿ ಕೇವಲ 9 ತಿಂಗಳು ಮಾತ್ರ ಆಗಿದ್ದು, ಆತಂಕಕಾರಿಯಾದ ವಿಷಯವೆಂದರೆ ಅವರು ಎರಡು ತಿಂಗಳ ಗರ್ಭಿಣಿಯಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತ ಸುನೀತಾ ಕುಟುಂಬದವರ ಆರೋಪದ ಪ್ರಕಾರ, ಮದುವೆಯಾದ ದಿನದಿಂದಲೇ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಪದೇಪದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು.
ವಿಶೇಷವಾಗಿ ಪತಿ ಗಿರೀಶ ದೊಡ್ಡಮನಿ ಅವರಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದಳು ಎಂದು ಕುಟುಂಬದವರು ದೂರಿದ್ದಾರೆ.

ಆತ್ಮಹತ್ಯೆ ಅಲ್ಲ, ಕೊಲೆ ಆರೋಪ
ಸುನೀತಾ ಆತ್ಮಹತ್ಯೆ ಮಾಡಿಕೊಂಡಿಲ್ಲ,
“ಅವಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಎಂದು ತೋರಿಸಲಾಗಿದೆ”
ಎಂದು ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಮೃತಳ ಕುತ್ತಿಗೆ ಭಾಗದಲ್ಲಿ ಅನುಮಾನಾಸ್ಪದ ಗುರುತುಗಳು ಕಂಡುಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಮುಂದೆ ಧರಣಿ
ಈ ಘಟನೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತಳ ಕುಟುಂಬದವರು ಶಿಗ್ಗಾವಿ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಆರೋಪಿಗಳ ಬಂಧನ ,ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರು ಮೇಲೆ ಒತ್ತಡ ಹೇರಿದರು.
ಈ ವೇಳೆ ಕೆಲಕಾಲ ಶಿಗ್ಗಾವಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಪೊಲೀಸ್ ತನಿಖೆ ಆರಂಭ
ಘಟನೆ ಸಂಬಂಧ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು,
ಪೋಸ್ಟ್ಮಾರ್ಟಂ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದುಎಂದು ಪೊಲೀಸರು ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪ, ಗರ್ಭಿಣಿ ಮಹಿಳೆಯ ಅನುಮಾನಾಸ್ಪದ ಸಾವು ಮತ್ತು ಕುಟುಂಬದವರ ಗಂಭೀರ ಆರೋಪಗಳು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿವೆ.
ಪೊಲೀಸರ ತನಿಖೆಯಿಂದಲೇ ಈ ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.




