Nikhitha Suicide Case : ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

Nikhitha Suicide Case : ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಿಯಕರನ ಮನೆಯಲ್ಲೇ ಯುವತಿ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಮೃತ ಯುವತಿಯ ವಿವರ
ಹಾಸನ ಜಿಲ್ಲೆಯ ಅರಸಿಕೆರೆ ಮೂಲದ ನಿಖಿತಾ (19) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೊಸ ವರ್ಷದ ಆಚರಣೆ ನಿಮಿತ್ತ ಜನವರಿ 1ರಂದು ನಿಖಿತಾ ಅರಸಿಕೆರೆಯಿಂದ ಬೆಂಗಳೂರಿನ ಪಿಲ್ಲಹಳ್ಳಿಯಲ್ಲಿರುವ ತನ್ನ ಪ್ರಿಯಕರನ ಮನೆಗೆ ಬಂದಿದ್ದಳು.
ನಿಖಿತಾ ಹಾಗೂ ಪಿಲ್ಲಹಳ್ಳಿ ಗ್ರಾಮದ ರಾಘವೇಂದ್ರ ಕಳೆದ 5–6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಇಬ್ಬರೂ ನಿಯಮಿತವಾಗಿ ಭೇಟಿಯಾಗುತ್ತಿದ್ದರು ಮತ್ತು ಒಟ್ಟಿಗೆ ಸಮಯ ಕಳೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಮದುವೆ ವಿಚಾರದಲ್ಲಿ ಉಂಟಾದ ಮನಸ್ತಾಪ
ಹೊಸ ವರ್ಷದಂದು ಪ್ರಿಯಕರನ ಮನೆಗೆ ಬಂದ ನಿಖಿತಾ, ತನ್ನನ್ನು ಮದುವೆಯಾಗುವಂತೆ ರಾಘವೇಂದ್ರನಿಗೆ ಒತ್ತಾಯಿಸಿದ್ದಾಳೆ.
ಆದರೆ, ಇದಕ್ಕೆ ರಾಘವೇಂದ್ರ ಸಮಯ ಕೊಡಬೇಕೆಂದು ಹೇಳಿದ್ದಾನೆ. ಈ ಮಾತಿನಿಂದ ಮನನೊಂದ ನಿಖಿತಾ ತೀವ್ರವಾಗಿ ಬೇಸರಗೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಇದರ ನಡುವೆ, ನಿಖಿತಾ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾಳೆ.
ವಿಷಯ ತಿಳಿದ ಕುಟುಂಬದವರು ತಕ್ಷಣವೇ ಮರುಕರೆ ಮಾಡುವಷ್ಟರಲ್ಲಿ ಆಕೆ ಪ್ರಿಯಕರನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂಬ ಮಾಹಿತಿ ದೊರೆತಿದೆ.
ಕೊಲೆ ಶಂಕೆ- ಯುವತಿಯ ಪೋಷಕರಿಂದ ದೂರು
ನಿಖಿತಾ ಪೋಷಕರು, ಪ್ರೀತಿ ಮಾಡಿದ ಯುವಕನೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸರು ಆರೋಪಿ ರಾಘವೇಂದ್ರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾಘವೇಂದ್ರ ಮತ್ತು ನಿಖಿತಾ ನಡುವೆ ಪ್ರೀತಿ ಹುಟ್ಟಿದ್ದು ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದ ಮೂಲಕ. ಚಾಟಿಂಗ್ನಿಂದ ಆರಂಭವಾದ ಸ್ನೇಹ, ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿತ್ತು.
ನಿಖಿತಾ 19 ವರ್ಷಕ್ಕೆ ಕಾಲಿಟ್ಟ ಬಳಿಕ, ರಾಘವೇಂದ್ರ ಹುಡುಗಿಯ ಮನೆಯವರಿಗೆ ಮದುವೆ ಭರವಸೆ ನೀಡಿದ್ದನೆಂಬ ಮಾಹಿತಿಯೂ ಹೊರಬಿದ್ದಿದೆ.
ಪೊಲೀಸ್ ತನಿಖೆ ಮುಂದುವರಿಕೆ
ಪ್ರಸ್ತುತ ಪ್ರಕರಣದ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ಆತ್ಮಹತ್ಯೆಯೇ ಅಥವಾ ಕೊಲೆ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.




