
Cricketer Quinton de Kock : ದಕ್ಷಿಣ ಆಫ್ರಿಕಾದ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ತಮ್ಮ ಏಕದಿನ (ODI) ನಿವೃತ್ತಿಯ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. ಭಾರತದ ವೇದಿಕೆಯಲ್ಲಿಯೇ ನಡೆದ 2023ರ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವರು ODI ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ಆದರೆ ಇದೀಗ ಅವರು ಮರುಕಳಿಸಿದ್ದು, ಮುಂಬರುವ ಪಾಕಿಸ್ತಾನ ಪ್ರವಾಸಕ್ಕಾಗಿ ಘೋಷಿಸಲಾದ ದಕ್ಷಿಣ ಆಫ್ರಿಕಾದ ವೈಟ್ಬಾಲ್ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.
32 ವರ್ಷದ ಡಿ ಕಾಕ್ 2024ರ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದರೋ ಹೊರತು, ಆ ನಂತರ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನೂ ಆಡಿಲ್ಲ. ಅವರು ಸಂಪೂರ್ಣವಾಗಿ ಫ್ರಾಂಚೈ ಸಿ ಟೂರ್ನಿಗಳತ್ತ ಗಮನಹರಿಸಿದ್ದರು. ಆದರೆ ಈಗ, ದೇಶಕ್ಕಾಗಿ ಮತ್ತೆ ಆಟವಾಡಲು ನಿರ್ಧಾರ ಮಾಡಿ ತಮ್ಮ ನಿವೃತ್ತಿಯನ್ನು ಹಿಂದಕ್ಕೆ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್ ಡಿ ಕಾಕ್ ಅವರ ಮರುಪ್ರವೇಶದ ಕುರಿತು ಪ್ರತಿಕ್ರಿಯಿಸಿದ್ದು “ಕ್ವಿಂಟನ್ ವೈಟ್ಬಾಲ್ ಕ್ರಿಕೆಟ್ಗೆ ಮರಳಿರುವುದು ನಮಗೆ ಪ್ರಮುಖ ಉತ್ತೇಜನ. ಕಳೆದ ತಿಂಗಳು ನಾವು ಅವರ ಭವಿಷ್ಯದ ಬಗ್ಗೆ ಚರ್ಚಿಸಿದಾಗ, ಅವರು ಇನ್ನೂ ದೇಶವನ್ನು ಪ್ರತಿನಿಧಿಸಲು ಬಲವಾದ ಇಚ್ಛೆ ಹೊಂದಿದ್ದಾರೆ ಎಂಬುದು ಸ್ಪಷ್ಟವಾಯಿತು. ಅವರ ಆಟದ ಗುಣಮಟ್ಟವನ್ನು ಯಾವೊಬ್ಬರೂ ಕೂಡ ಅನುಮಾನಿಸುವ ಅಗತ್ಯವಿಲ್ಲ. ಅವರು ಮತ್ತೆ ತಂಡಕ್ಕೆ ಸೇರಿಕೊಳ್ಳುವುದರಿಂದ ತಂಡಕ್ಕೆ ಬಹುಮಟ್ಟಿಗೆ ಲಾಭವಾಗಲಿದೆ” ಎಂದಿದ್ದಾರೆ.
ಇನ್ನು ಡಿ ಕಾಕ್ ಅವರು 140ಕ್ಕೂ ಹೆಚ್ಚು ಏಕದಿನ ಪಂದ್ಯಗಳಲ್ಲಿ 17 ಶತಕಗಳನ್ನು ಗಳಿಸಿದ ಅನುಭವಿ ಆಟಗಾರರಾಗಿದ್ದು, ಅವರ ಮರುಪ್ರವೇಶದಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂಬ ನಿರೀಕ್ಷೆಯಿದೆ.




