Sullia : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನಕಲಕುವ ಘಟನೆ ನಡೆದಿದೆ. ರಾತ್ರಿ ಮನೆಯಲ್ಲೇ ಮಲಗಿದ್ದ ತಾಯಿ ಮತ್ತು ಮೂರು ವರ್ಷದ ಮಗು ಬೆಳಗ್ಗೆ ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Sullia : ಮೃತರನ್ನು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ಹರೀಶ್ ಅವರ ಪತ್ನಿ ಮಧುಶ್ರೀ (34) ಹಾಗೂ ಅವರ ಮಗು ಧನ್ವಿ (3) ಎಂದು ಗುರುತಿಸಲಾಗಿದೆ. ಹರೀಶ್ ಅವರು ತಮ್ಮ ತಾಯಿ, ಪತ್ನಿ ಮತ್ತು ಮಗುವಿನೊಂದಿಗೆ ಆರ್ವಾರ ಮನೆಯಲ್ಲಿ ವಾಸವಾಗಿದ್ದರು.
ಸಾಮಾನ್ಯವಾಗಿ ರಾತ್ರಿ ಮನೆಯವರೊಂದಿಗೆ ಕೆಲಸ ಕಾರ್ಯ ಮುಗಿಸಿ ಮಲಗಿದ್ದ ಮಧುಶ್ರೀ, ಬೆಳಗ್ಗೆ ಮಗು ಸಹಿತ ಕಾಣೆಯಾಗಿದ್ದರು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದರು. ಬಳಿಕ ಮನೆ ಸಮೀಪದ ಕೆರೆಯಲ್ಲಿ ತಾಯಿ–ಮಗುವಿನ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆ ಶಂಕೆ
ಮಧುಶ್ರೀ ಅವರು ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರು ಕೆರೆಗೆ ಹಾರುವ ಮುನ್ನ ಮಗುವನ್ನು ತನ್ನ ಸೊಂಟಕ್ಕೆ ಬಟ್ಟೆಯಿಂದ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಮೃತದೇಹ ಪತ್ತೆಯಾಗುವಾಗ ಮಗು ತಾಯಿಯನ್ನು ಅಪ್ಪಿಕೊಂಡ ಸ್ಥಿತಿಯಲ್ಲೇ ಕಂಡುಬಂದಿದೆ.
ಇದನ್ನು ಓದಿ : ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ
ಮಧುಶ್ರೀ ಅವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದವರು. ನಾಲ್ಕು ವರ್ಷಗಳ ಹಿಂದೆ ಹರೀಶ್ ಅವರನ್ನು ವಿವಾಹವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮಗಳ ಸಾವಿನ ಕುರಿತು ಅನುಮಾನವಿದೆ ಎಂದು ಮಧುಶ್ರೀ ಅವರ ತಾಯಿ ರತ್ನಾವತಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸ್ ತನಿಖೆ
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಬೆಳ್ಳಾರೆ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಆತ್ಮಹತ್ಯೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಇಂದಿನಿಂದ ಶುರು SSLC ಪೂರ್ವ ಸಿದ್ಧತಾ ಪರೀಕ್ಷೆ, ಮೂರು ಹಂತದಲ್ಲಿ ಎಕ್ಸಾಮ್




