Nelamangala News : ಮದ್ಯದ ನಶೆಯಲ್ಲಿ ತಾಯಿಯೊಂದಿಗೆ ತಮಾಷೆ ಮಾಡಲು ಹೋಗಿ ಯುವಕನೊಬ್ಬ ಅಕಸ್ಮಿಕವಾಗಿ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

Nelamangala News : ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ ಯುವಕ, ನೇಣಿನ ಕುಣಿಕೆಗೆ ಸಿಲುಕಿ ಮೃತಪಟ್ಟಿದ್ದಾನೆ.
ಈ ದುರ್ಘಟನೆ ನೆಲಮಂಗಲ ಟೌನ್ ವ್ಯಾಪ್ತಿಯ ರೋಹಿತ್ ನಗರದಲ್ಲಿ ನಡೆದಿದ್ದು, ವಿಜಯಕುಮಾರ್ (28) ಮೃತಪಟ್ಟ ಯುವಕ. ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಿಜಯಕುಮಾರ್ ಮದ್ಯ ಸೇವಿಸಿ ಮನೆಗೆ ಬಂದಿದ್ದ ಎನ್ನಲಾಗಿದೆ.
ಹಣಕ್ಕಾಗಿ ಜಗಳ
ನಿನ್ನೆ ಸಂಜೆ ಮದ್ಯಪಾನ ಮಾಡಿಕೊಂಡು ಮನೆಗೆ ಬಂದ ವಿಜಯಕುಮಾರ್ ತಾಯಿಯ ಬಳಿ ಖರ್ಚಿಗೆ ಹಣ ಕೇಳಿದ್ದಾನೆ. ತಾಯಿ ಹಣ ನೀಡಲು ನಿರಾಕರಿಸಿದಾಗ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ತಮಾಷೆಗಾಗಿ ನೇಣಿನ ರೀತಿಯಲ್ಲಿ ಭಯ ಹುಟ್ಟಿಸಲು ಹೋಗಿ, ಅಜಾಗರೂಕತೆಯಿಂದ ಕುಣಿಕೆಗೆ ಸಿಲುಕಿ ಮೃತಪಟ್ಟಿದ್ದಾನೆ.
ಇದನ್ನು ಓದಿ : ಹೊಸ ವರ್ಷದ ರಾತ್ರಿ 12 ಗಂಟೆಗೆ ಜನ 12 ದ್ರಾಕ್ಷಿಗಳನ್ನು ತಿನ್ನೋದೇಕೆ?
ಹಿಂದೆಯೂ ಇದೇ ರೀತಿಯ ವರ್ತನೆ
ಕುಟುಂಬಸ್ಥರ ಮಾಹಿತಿ ಪ್ರಕಾರ, ವಿಜಯಕುಮಾರ್ ಇದಕ್ಕೂ ಮೊದಲು ಕೂಡ ಸಾವಿನ ಬಗ್ಗೆ ತಮಾಷೆ ಮಾಡುತ್ತಿದ್ದ.
ಇದರಿಂದ ಆತಂಕಗೊಂಡಿದ್ದ ತಾಯಿ, “ಇಂತಹ ವಿಷಯಗಳಲ್ಲಿ ತಮಾಷೆ ಮಾಡಬೇಡ” ಎಂದು ಹಲವಾರು ಬಾರಿ ಬುದ್ಧಿ ಹೇಳಿದ್ದರು. ಆದರೆ ಅದೇ ಚಾಳಿಯನ್ನು ಮುಂದುವರಿಸಿದ್ದೇ ಇಂದು ದಾರುಣ ಅಂತ್ಯಕ್ಕೆ ಕಾರಣವಾಗಿದೆ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಘಟನೆ ನಿನ್ನೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ನಡೆದಿದ್ದು, ಮಾಹಿತಿ ಪಡೆದ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನಿಸಲಾಗಿದೆ.
ಮದುವೆಯ ಕನಸು ಕಂಡ ತಾಯಿಗೆ ಆಘಾತ
ವಿಜಯಕುಮಾರ್ಗೆ ಮದುವೆ ಮಾಡಬೇಕೆಂದು ತಾಯಿ ಕನಸು ಕಂಡಿದ್ದರು. ಆದರೆ ಮಗನ ಅಜಾಗರೂಕ ತಮಾಷೆಯೇ ಆ ಕನಸನ್ನು ಚೂರುಮೂರು ಮಾಡಿದೆ. ಮಗನ ಅಕಾಲಿಕ ಮರಣದಿಂದ ತಾಯಿ ಹಾಗೂ ಸಂಬಂಧಿಕರು ಆಳವಾದ ದುಃಖದಲ್ಲಿ ಮುಳುಗಿದ್ದಾರೆ.
ಮದ್ಯಪಾನದ ನಶೆ ಹಾಗೂ ಅಜಾಗರೂಕ ತಮಾಷೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ನೋವಿನ ಉದಾಹರಣೆಯಾಗಿದೆ.
ಇದನ್ನು ನೋಡಿ : ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?




