
TUMAKURU : ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಡಿಜಿಟಲ್ ಸಹಿ ಬಳಸಿ ಭೂ ಕಬಳಿಕೆ ಆಗಿರೋ ಆರೋಪ ಕೇಳಿ ಬಂದ ಬೆನ್ನಲ್ಲೇ ತುಮಕೂರು ಜಿಲ್ಲೆಯಾದ್ಯಂತ ಎಸಿ, ತಹಶೀಲ್ದಾರ್ಗಳಿಗೆ ಲೋಕಾಯುಕ್ತ ಬಿಗ್ ಶಾಕ್ ನೀಡಿದೆ. ಎಸಿ, ತಹಶೀಲ್ದಾರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿಲ್ಲ ಬದಲಾಗಿ, ಎಲ್ಲಾ ಎಸಿ ಹಾಗೂ ತಹಶೀಲ್ದಾರ್ಗಳ ವಿರುದ್ಧ ಲೋಕಾಯುಕ್ತ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.
ದೇಶ ಕಾಯೋ ಸೈನಿಕರು ಅಂದ್ರೆ ಎಲ್ಲರ ಮನದಲ್ಲಿ ಒಂದು ರೀತಿಯ ಭಕ್ತಿ- ಭಾವ, ಒಂದು ರೀತಿ ಹೆಮ್ಮೆ. ಆದ್ರೆ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿರೋ ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಅವರನ್ನು ಅವಲಂಬಿತ ಕುಟುಂಬಗಳಿಗೆ ಸೌಲಭ್ಯಗಳನ್ನು ಒದಗಿಸಲು ವಿಳಂಬವಾಗ್ತಾ ಇರೋ ಬೆನ್ನಲ್ಲೇ ತುಮಕೂರು ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದು, ಎಲ್ಲಾ ತಹಶೀಲ್ದಾರ್ಗಳು ಹಾಗೂ ಉಪವಿಭಾಗಾಧಿಕಾರಿಗಳ ಮೇಲೆ ಲೋಕಾಯುಕ್ತ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿದೆ.
ತುಮಕೂರು ಉಪವಿಭಾಗಾಧಿಕಾರಿ ನಹಿದಾ ಝಮ್ ಝಮ್, ತಿಪಟೂರು ಉಪವಿಭಾಗಾಧಿಕಾರಿ ಸಪ್ತ ಶ್ರೀ, ಮಧುಗಿರಿಯ ಉಪವಿಭಾಗಾಧಿಕಾರಿ ಗೂಟೂರು ಶಿವಪ್ಪ, ತುಮಕೂರು ತಹಶೀಲ್ದಾರ್- ಪಿ.ಎಸ್.ರಾಜೇಶ್ವರಿ, ಗುಬ್ಬಿ ತಹಶೀಲ್ದಾರ್- ಬಿ.ಆರತಿ, ಚಿಕ್ಕನಾಯಕನಹಳ್ಳಿ ತಹಶೀಲ್ದಾರ್- ಪುರಂದರ, ಕುಣಿಗಲ್ ತಹಶೀಲ್ದಾರ್- ರಶ್ಮಿ, ಮಧುಗಿರಿ ತಹಶೀಲ್ದಾರ್- ಎಚ್. ಶ್ರೀನಿವಾಸ್, ಕೊರಟಗೆರೆ ತಹಶೀಲ್ದಾರ್- ಕೆ.ಮಂಜುನಾಥ್, ಪಾವಗಡದಲ್ಲಿ ಈ ಹಿಂದೆ ಇದ್ದ ತಹಶೀಲ್ದಾರ್ ವರದರಾಜು, ಶಿರಾದಲ್ಲಿ ಈ ಹಿಂದೆ ಇದ್ದ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ತಿಪಟೂರು ತಹಶೀಲ್ದಾರ್- ಮೋಹನ್ ಕುಮಾರ್ ಹಾಗೂ ತುರುವೇಕೆರೆ ತಹಶೀಲ್ದಾರ್- ಎಂ.ಇ.ಕುಂಇ ಅಹಮದ್ ಮೇಲೆ ದೂರು ದಾಖಲಾಗಿದೆ.
ಇನ್ನು ತುಮಕೂರು ಜಿಲ್ಲೆಯಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಮಾಜಿ ಸೈನಿಕರಿದ್ದಾರೆ. ಸೇವೆಯಿಂದ ನಿವೃತ್ತಿ ಹೊಂದಿ ಸುಮಾರು ವರ್ಷಗಳೇ ಆಗಿದ್ರು ಕೂಡ ಈವರೆಗೂ ನಮಗೆ ಯಾವುದೇ ಸೌಲಭ್ಯವನ್ನು ಕೊಟ್ಟಿಲ್ಲ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸುಮಾರು ಬಾರಿ ಅರ್ಜಿ ಹಾಕಿದ್ರು ಯಾರು ಕಿವಿ ಕೊಡುತ್ತಿಲ್ಲ. ಅಲ್ದೇ ಮಾಜಿ ಸೈನಿಕರು ಒಂದು ಕಡೆ ಮೀಟಿಂಗ್ ಮಾಡಲು ಕೂಡ ಜಾಗ ಕೊಟ್ಟಿಲ್ಲ. ಈಗ ಲೋಕಾಯುಕ್ತ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರೋದು ಸಂತೋಷ ತಂದಿದೆ ಎಂದು ಮಾಜಿ ಸೈನಿಕರಿಬ್ಬರು ಅಭಿಪ್ರಾಯ ಹಂಚಿಕೊಂಡರು.
ಒಟ್ಟಿನಲ್ಲಿ ನಿವೃತ್ತ ಯೋಧರರಿಗೆ ಹಾಗೂ ಹುತಾತ್ಮ ಯೋಧರ ಅವಲಂಬಿತ ಕುಟುಂಬಗಳಿಗೆ ನಿಯಮಾನುಸಾರ ಸರ್ಕಾರದಿಂದ ನಿವೇಶನವನ್ನು ನಿಯಮಾನುಸಾರ ನಿಗದಿತ ಸಮಯದಲ್ಲಿ ನೀಡದೇ ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿರುವುದು ಹಾಗೂ ಕರ್ತವ್ಯಲೋಪ ಎಸಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಲೋಕಾಯುಕ್ತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮಾಜಿ ಸೈನಿಕರಿಗೆ ನ್ಯಾಯ ಸಿಗುತ್ತಾ ಎಂದು ಕಾದುನೋಡಬೇಕಿದೆ.




