Bagalkot : ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ದಾಖಲಾಗಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

Bagalkot : ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ದಾಖಲಾಗಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯದ್ದು ಎನ್ನಲಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ದಿಕ್ಕು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆದ ವಿಡಿಯೋದಲ್ಲಿ, ಸಂತ್ರಸ್ತೆ “ನಾನು ಹೆಸರು ಕೆಡಿಸುವ ಉದ್ದೇಶದಿಂದ ತಪ್ಪು ಆರೋಪ ಮಾಡಿದ್ದೇನೆ, ಕ್ಷಮಿಸಿ” ಎಂದು ಹೇಳುತ್ತಿರುವ ದೃಶ್ಯಗಳಿವೆ. ಇದರಲ್ಲಿ ಮ್ಯೂಸಿಕ್ ಮೈಲಾರಿ, ಲತಾ, ಶ್ರಾವಣಿ ಹಾಗೂ ಡ್ಯಾನ್ಸರ್ ರುಕ್ಕು ಬಗ್ಗೆ ತಪ್ಪು ಮಾತು ಆಡಿದ್ದೇನೆ ಎಂದು ಯುವತಿ ಹೇಳಿರುವುದು ಕಂಡುಬರುತ್ತದೆ. ಈ ವಿಡಿಯೋವನ್ನು ಮೈಲಾರಿ ಅಭಿಮಾನಿಗಳೇ ಹಳೆಯದನ್ನು ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ವಿಡಿಯೋ ಕುರಿತು ಸಂತ್ರಸ್ತೆಯ ಸ್ಪಷ್ಟನೆ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂತ್ರಸ್ತೆ ಸ್ಪಷ್ಟನೆ ನೀಡಿದ್ದು, “ಈ ವಿಡಿಯೋ ಇತ್ತೀಚಿನದ್ದಲ್ಲ. ನನ್ನ ಮೇಲೆ ಅತ್ಯಾಚಾರ ನಡೆದ ದಿನ ಬಲವಂತವಾಗಿ ಮಾಡಿಸಿದ ವಿಡಿಯೋ ಇದು” ಎಂದು ಹೇಳಿದ್ದಾರೆ.
“ಲತಾ, ರುಕ್ಕು, ಡಿಜೆ ಮಾಂತೇಶ್ ಗೋಕಾಕ್ ಸೇರಿದಂತೆ ಕೆಲವರು ನನ್ನ ಮೇಲೆ ಒತ್ತಡ ಹೇರಿಸಿ ಈ ವಿಡಿಯೋ ಮಾಡಿಸಿದ್ದರು” ಎಂದು ಆರೋಪಿಸಿದ್ದಾರೆ.
“ಈಗ ಅದೇ ವಿಡಿಯೋವನ್ನು ಎಡಿಟ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹರಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಇದಕ್ಕೂ ಜೊತೆಗೆ, ವಿಡಿಯೋ ಶೇರ್ ಮಾಡುತ್ತಿರುವವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದಾರೆ. “ನಾನು ದಲಿತ ಹುಡುಗಿಯಾಗಿದ್ದು, ನನಗೆ ನ್ಯಾಯ ಬೇಕು” ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ : ಗಲಾಟೆ ಬಿಡಿಸಲು ಹೋದ ವ್ಯಕ್ತಿಯ ಕೊಲೆ
ಪ್ರಕರಣದ ಹಿನ್ನೆಲೆ
ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಮ್ಯೂಸಿಕ್ ಮೈಲಾರಿ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಮ್ಯೂಸಿಕ್ ಮೈಲಾರಿ, ಡಿಸೆಂಬರ್ 17ರಂದು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಹಾಲಿಂಗಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಈ ವರ್ಷ ಸರ್ಕಾರಕ್ಕೆ ಶೇ. 8 ಹೆಚ್ಚು ಟ್ಯಾಕ್ಸ್ ಸಂಗ್ರಹ




