Ramanagara : ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎನ್ನುವ ಮಾತು ಇಲ್ಲಿ ಘನಘೋರ ಅಪರಾಧಕ್ಕೆ ತಿರುಗಿದೆ. 40 ವರ್ಷದ ವ್ಯಕ್ತಿ ಮತ್ತು 19 ವರ್ಷದ ಯುವತಿಯ ನಡುವಿನ ಪ್ರೇಮ ಸಂಬಂಧವು ಕೊನೆಗೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ.

Ramanagara : ಏನಿದು ಲವ್ ಕಹಾನಿ?
ಮಾಗಡಿ ತಾಲೂಕಿನ ದೋಣಕುಪ್ಪೆ ಗ್ರಾಮದ ಮೂಲದ ಹಾಗೂ ಪ್ರಸ್ತುತ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದಲ್ಲಿ ವಾಸವಾಗಿದ್ದ ಚಲುವ (40) ಎಂಬವರು, ತಮ್ಮ ಸಂಬಂಧಿಯೇ ಆದ ಕೆಂಪಣ್ಣ ಅವರ 19 ವರ್ಷದ ಮಗಳನ್ನು ಪ್ರೀತಿಸುತ್ತಿದ್ದರು.
ಸುಮಾರು 15 ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದು, ಮಂಡ್ಯದ ಕೆ.ಎಂ. ದೊಡ್ಡಿಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು.
ಪರಿವಾರದ ರಾಜೀಪಂಚಾಯತಿ ಬಳಿಕ ಯುವತಿಯನ್ನು ಮತ್ತೆ ತಂದೆ ಮನೆಗೆ ಕರೆತರಲಾಗಿತ್ತು. ಆದರೆ, ಆಕೆಯನ್ನು ಮನೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಆರೋಪಿಸಿ, ಚಲುವ ಅವರು ಫೇಸ್ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು.ಇದೇ ವಿಚಾರ ಯುವತಿಯ ತಂದೆ ಕೆಂಪಣ್ಣನ ಕೋಪಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕೆಂಪಣ್ಣ, ತನ್ನ ಬಾಮೈದರಾದ ರಾಮಕೃಷ್ಣ ಮತ್ತು ಮಂಜು ಅವರೊಂದಿಗೆ ಸೇರಿ, ಡಿಸೆಂಬರ್ 18ರಂದು ಕುಣಿಗಲ್ ಪಟ್ಟಣದಲ್ಲಿ ಚಲುವನನ್ನು ಕಿಡ್ನಾಪ್ ಮಾಡಿದ್ದಾರೆ.
ಆತನನ್ನು ಹಲವು ಕಡೆ ಸುತ್ತಾಡಿಸಿ, ಕೊನೆಗೆ ಕಾರಿನಲ್ಲಿಯೇ ಕತ್ತು ಕೊಯ್ದು, ಮಾಗಡಿ ತಾಲೂಕಿನ ಗಟ್ಟಿಪುರ ಗ್ರಾಮದ ಹೊರವಲಯದ ಹಳ್ಳದ ಬಳಿ ಮೃತದೇಹವನ್ನು ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ.
ಇದನ್ನು ಓದಿ : ಗಲಾಟೆ ಬಿಡಿಸಲು ಹೋದ ವ್ಯಕ್ತಿಯ ಕೊಲೆ
ಹಳ್ಳದ ಬಳಿ ಪತ್ತೆಯಾದ ಮೃತದೇಹ
ಬೆಳಗ್ಗೆ ಹಳ್ಳದ ಬಳಿ ಶವ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮಾಗಡಿ ಪೊಲೀಸರು ಪರಿಶೀಲನೆ ನಡೆಸಿ, ಇದು ಕಿಡ್ನಾಪ್ ಮಾಡಿ ಹತ್ಯೆ ಮಾಡಿದ ಪ್ರಕರಣ ಎಂಬುದನ್ನು ದೃಢಪಡಿಸಿದ್ದಾರೆ.ಆದರೆ, ಕಿಡ್ನಾಪ್ ಕುಣಿಗಲ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಪ್ರಕರಣವನ್ನು ಕುಣಿಗಲ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಚಲುವನ ಹತ್ಯೆಗೆ ಸಂಬಂಧಿಸಿದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ನೋಡಿ : ಈ ವರ್ಷ ಸರ್ಕಾರಕ್ಕೆ ಶೇ. 8 ಹೆಚ್ಚು ಟ್ಯಾಕ್ಸ್ ಸಂಗ್ರಹ




