Bagalkot School Abuse : ಬಾಗಲಕೋಟೆಯ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕ ದಂಪತಿ 16 ವರ್ಷದ ಬುದ್ಧಿಮಾಂದ್ಯ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.

Bagalkot School Abuse : ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶಿಕ್ಷಕರಿಂದಲೇ ನಡೆದಿರುವ ಭೀಕರ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.
ನವನಗರದ 54ನೇ ಸೆಕ್ಟರ್ನಲ್ಲಿ ಇರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಶಾಲೆಯಲ್ಲಿ 16 ವರ್ಷದ ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲ್ಲೆಗೊಳಗಾದ ಬಾಲಕನನ್ನು ದೀಪಕ್ ರಾಠೋಡ್ (16) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್ನಿಂದ ಬಾಲಕನಿಗೆ ಹೊಡೆದಿದ್ದಾರೆ.
ಜೊತೆಗೆ ಅವರ ಪತ್ನಿ ಮಾಲಿನಿ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಕ್ರೂರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೋಷಕರ ಆಕ್ರೋಶ
ಈ ಅಮಾನವೀಯ ವರ್ತನೆಯ ವಿರುದ್ಧ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಯನ್ನು ಪ್ರಶ್ನಿಸಲು ಬಂದ ಪೋಷಕರಿಗೆ ಶಿಕ್ಷಕ ದಂಪತಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.
ವಿಷಯ ತಿಳಿದ ತಕ್ಷಣ ಪೋಷಕರು ಶಾಲೆ ಮುಂದೆ ಜಮಾಯಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಮತ್ತೊಬ್ಬ ಶಿಕ್ಷಕನ ಮೇಲೂ ಆರೋಪ
ಈ ಪ್ರಕರಣದಲ್ಲಿ ಶಿಕ್ಷಕ ದಂಪತಿಯ ಜೊತೆಗೆ ಸಹ ಶಿಕ್ಷಕ ವಿಶಾಲ್ ಪಾಟೀಲ್ ಕೂಡ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಆರೋಪದಿಂದ ಶಾಲಾ ಆಡಳಿತದ ಮೇಲೂ ಪ್ರಶ್ನೆಗಳು ಎದ್ದಿವೆ.
ತಾಯಿ ಕಣ್ಣೀರಿನ ಸಾಕ್ಷ್ಯ
ಮಾತನಾಡಿದ ದೀಪಕ್ ತಾಯಿ ಪಾರ್ವತಿ ಕಣ್ಣೀರಿಟ್ಟಿದ್ದು,
“ಪ್ರತಿ ತಿಂಗಳು 6 ಸಾವಿರ ರೂ. ಫೀಸ್ ಕೊಡ್ತೀವಿ. ಮಕ್ಕಳಿಗೆ ಶೌಚಾಲಯ ತೊಳೆಯುವ ಕೆಲಸ ಮಾಡಿಸ್ತಾರೆ. ಒಪ್ಪದ್ರೆ ಕಣ್ಣಿಗೆ ಖಾರದ ಪುಡಿ ಹಾಕ್ತಾರೆ, ಬೆಲ್ಟ್-ಪೈಪ್ನಿಂದ ಹೊಡೆಯುತ್ತಾರೆ. ನಮ್ಮ ಮಗನಷ್ಟೇ ಅಲ್ಲ, ಇನ್ನೂ ಮಕ್ಕಳಿಗೂ ಹಿಂಸೆ ಆಗಿದೆ. ಶಾಲೆಯ ಲೈಸೆನ್ಸ್ ರದ್ದು ಮಾಡಿ ಬಂದ್ ಮಾಡಬೇಕು,”
ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕ ದಂಪತಿಯ ಸ್ಪಷ್ಟನೆ
ಪೊಲೀಸ್ ವಿಚಾರಣೆ ವೇಳೆ ಶಿಕ್ಷಕ ಅಕ್ಷಯ್ ಹಾಗೂ ಪತ್ನಿ ಮಾಲಿನಿ,
“ನಾವು ಯಾವುದೇ ಹಲ್ಲೆ ಮಾಡಿಲ್ಲ. ಖಾರದ ಪುಡಿ ಎರಚಿಲ್ಲ, ಮಕ್ಕಳೆ ಎರಚಿಕೊಂಡಿದ್ದಾರೆ. ಬೇಕಿದ್ದರೆ ಇತರ ಮಕ್ಕಳನ್ನು ಕೇಳಿ,”
ಎಂದು ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ನವನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿಕ್ಷಕ ದಂಪತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.




