CM Siddaramaiah : ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸಂತಾಪ ಸೂಚಿಸಿದರು. ಶಾಮನೂರು ಶಿವಶಂಕರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಮಂಡಿಸಲಾದ ಸಂತಾಪ ನಿರ್ಣಯಕ್ಕೆ ಬೆಂಬಲ ನೀಡಿ ಮಾತನಾಡಿದ ಅವರು, ಶಾಮನೂರು ಜನಪರ ನಾಯಕನಾಗಿದ್ದರು ಎಂದು ಸ್ಮರಿಸಿದರು.

CM Siddaramaiah : ರಾಜಕೀಯ ಜೀವನದಲ್ಲಿ ಅಪಾರ ಅನುಭವ
ಶಾಮನೂರು ಶಿವಶಂಕರಪ್ಪ ಅವರು ತಮ್ಮ 63ನೇ ವಯಸ್ಸಿನಲ್ಲಿ ವಿಧಾನಸಭೆ ಪ್ರವೇಶಿಸಿ ಆರು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಅವರು ಒಮ್ಮೆ ಸಂಸತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ದೀರ್ಘ ಕಾಲ ರಾಜಕೀಯದಲ್ಲಿದ್ದು, ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಪುರಸಭೆಯಿಂದ ವಿಧಾನಸಭೆ ತನಕದ ಪಯಣ
1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಶಾಮನೂರು, ನಂತರ ನಗರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾರ್ವಜನಿಕ ಬದುಕಿನ ಪ್ರತಿ ಹಂತದಲ್ಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನಾಗಿ ಗುರುತಿಸಿಕೊಂಡಿದ್ದರು ಎಂದು ಸಿಎಂ ಹೇಳಿದರು.

ಬಾಪೂಜಿ ವಿದ್ಯಾ ಕೇಂದ್ರ: ದಾವಣಗೆರೆಯ ಶೈಕ್ಷಣಿಕ ಕ್ರಾಂತಿ
ದಾವಣಗೆರೆಯಲ್ಲಿ ಬಾಪೂಜಿ ವಿದ್ಯಾ ಕೇಂದ್ರದ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಜಿಲ್ಲೆಯನ್ನು ವಿದ್ಯಾಕಾಶಿಯಾಗಿ ರೂಪಿಸಿದ ಶ್ರೇಯಸ್ಸು ಶಾಮನೂರರಿಗೆ ಸಲ್ಲುತ್ತದೆ.
ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದು ಸಿಎಂ ನೆನೆಸಿದರು.
ಜವಳಿ ಕ್ಷೇತ್ರಕ್ಕೆ ಹೊಸ ಗುರುತು
ಜವಳಿ ಕ್ಷೇತ್ರದಲ್ಲಿ ಅವನತಿ ಪ್ರಾರಂಭವಾದಾಗ, ದಾವಣಗೆರೆಗೆ ಒಂದು ಬ್ರಾಂಡ್ ಹೆಸರನ್ನು ತಂದುಕೊಟ್ಟವರು ಶಾಮನೂರು ಶಿವಶಂಕರಪ್ಪ. ಉದ್ಯಮಿಯಾಗಿ ಜಿಲ್ಲೆಯ ಆರ್ಥಿಕತೆಯನ್ನು ಬಲಪಡಿಸಲು ಅವರು ಮಹತ್ವದ ಪಾತ್ರ ವಹಿಸಿದ್ದರು.
ಅಜಾತಶತ್ರು ರಾಜಕಾರಣಿ
ದೀರ್ಘಕಾಲ ಎಐಸಿಸಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದ ಶಾಮನೂರು, ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ ನಾಯಕನಾಗಿದ್ದು ಅಜಾತಶತ್ರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವೈಯಕ್ತಿಕ ನೆನಪುಗಳನ್ನು ಹಂಚಿಕೊಂಡ ಸಿಎಂ
ದಾವಣಗೆರೆಗೆ ಭೇಟಿ ನೀಡುವಾಗಲೆಲ್ಲ ಶಾಮನೂರು ಅವರ ಗೆಸ್ಟ್ ಹೌಸ್ನಲ್ಲಿ ತಂಗುತ್ತಿದ್ದೆ, ಅವರ ಒತ್ತಾಯದ ಮೇರೆಗೆ ಮನೆಯಲ್ಲಿಯೇ ಊಟ ಮಾಡುತ್ತಿದ್ದೆ ಎಂದು ಸಿಎಂ ಸ್ಮರಿಸಿದರು. ತಮ್ಮ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿಯೇ ಆಚರಿಸಿಕೊಂಡಿದ್ದು ಕೂಡ ಅವರು ನೆನಪಿಸಿಕೊಂಡರು.
ಕೋವಿಡ್ ಸಮಯದ ಮಾನವೀಯ ಸೇವೆ
ಕೋವಿಡ್ ಸಂಕಷ್ಟದ ಸಮಯದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಆರು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿಸಿ ಜನರಿಗೆ ನೆರವಾದರು ಎಂದು ಸಿಎಂ ಶ್ಲಾಘಿಸಿದರು.
ಮಂತ್ರಿ ಮಂಡಲದ ಪಾತ್ರ ಮತ್ತು ಕುಟುಂಬ
ಹಿಂದೆ ಮುಖ್ಯಮಂತ್ರಿ ಆಗಿದ್ದಾಗ, ಶಾಮನೂರು ಶಿವಶಂಕರಪ್ಪ ಅವರು ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 2016ರ ಸಂಪುಟ ಪುನರ್ರಚನೆಯ ವೇಳೆ ತಮ್ಮ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಸಚಿವರನ್ನಾಗಿ ಮಾಡಲು ಕೋರಿಕೊಂಡಿದ್ದರು. ಇಂದು ಮಲ್ಲಿಕಾರ್ಜುನ್ ಅವರು ಪ್ರಸ್ತುತ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.
ಜನಪರ ನಾಯಕನ ಅಗಲಿಕೆ
15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಭೇಟಿ ಮಾಡಿದಾಗ ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದರು. ಅವರ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದರು. ಶಾಮನೂರು ಅವರ ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.




