ತಮಿಳುನಾಡಿನ ಕೊಯಮತ್ತೂರಿನಲ್ಲಿ 19 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ 19 ವರ್ಷದ NEET ಅಭ್ಯರ್ಥಿ ಅನುಕೀರ್ತನಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದ ಆಕೆ, ಮತ್ತೊಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು.
ಇತ್ತೀಚಿನ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಬಳಿಕ ಅನುಕೀರ್ತನಾ ಮಾನಸಿಕವಾಗಿ ತೀವ್ರವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ವಿದ್ಯಾರ್ಥಿನಿಯ ಸಾವಿನ ಬಳಿಕ ತಮಿಳುನಾಡಿನಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಗೆ ವಿನಾಯಿತಿ ನೀಡಬೇಕು ಎಂಬ ತಮ್ಮ ಬೇಡಿಕೆಯನ್ನು ಡಿಎಂಕೆ ಮತ್ತೊಮ್ಮೆ ಪುನರುಚ್ಚರಿಸಿದೆ. ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಪಕ್ಷ ಘೋಷಿಸಿದೆ.
ನೀಟ್ ಪರೀಕ್ಷೆ ಆರಂಭವಾದಾಗಿನಿಂದಲೇ ತಮಿಳುನಾಡು ಅದರ ವಿರುದ್ಧ ನಿಲುವು ತಾಳಿದೆ. ದುಬಾರಿ ತರಬೇತಿ ಕೇಂದ್ರಗಳ ನೆರವು ಪಡೆಯಲು ಸಾಧ್ಯವಾಗದ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಅನ್ಯಾಯ ಮಾಡುತ್ತಿದೆ ಎಂದು ಡಿಎಂಕೆ ವಾದಿಸುತ್ತಿದೆ.
ಈ ಹಿಂದೆ ನೀಟ್ ವಿನಾಯಿತಿಗಾಗಿ ತಮಿಳುನಾಡು ವಿಧಾನಸಭೆ ಮಸೂದೆ ಅಂಗೀಕರಿಸಿದ್ದರೂ, ರಾಷ್ಟ್ರಪತಿಗಳ ಅನುಮೋದನೆ ದೊರೆಯದ ಕಾರಣ ಅದು ಜಾರಿಗೆ ಬಂದಿಲ್ಲ. ವಿದ್ಯಾರ್ಥಿನಿಯ ಸಾವಿನೊಂದಿಗೆ ನೀಟ್ ಕುರಿತು ಚರ್ಚೆ ಮತ್ತು ವಿವಾದ ಮತ್ತೊಮ್ಮೆ ತೀವ್ರಗೊಂಡಿದೆ.




