Rain Alert : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆ ಸಂಪರ್ಕಗಳು ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ. ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಆಡಳಿತ ಮಂಡಳಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.
ಮಲೆನಾಡು ಭಾಗಗಳಲ್ಲಿ ಭಾರೀ ಮಳೆ
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು, ಕೊಡಗು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡು ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇಂದು ಭಾರೀ ಮಳೆಯಾಗುವ ಜಿಲ್ಲೆಗಳು
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇಂದು ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ.
ಜುಲೈ 1ರಂದು ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಅದೇ ರೀತಿ ಜುಲೈ 2ರಂದು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಇದನ್ನು ಓದಿ : ಕರಾವಳಿಯಲ್ಲಿ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ..!!

ಈ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಳ್ಳ ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜುಲೈ 2ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಮುಂದಿನ ಎರಡು-ಮೂರು ದಿನಗಳ ಕಾಲ ಮಳೆ
ಮುಂದಿನ ಎರಡು-ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ನದಿ ಹಾಗೂ ಸಮುದ್ರ ತೀರಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಯಾವುದೇ ಅನಾಹುತ ಸಂಭವಿಸದಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಇದನ್ನು ನೋಡಿ : ಸ್ವತಃ ತಾವೇ ಎಸ್ಐಆರ್ ಎನುಮರೇಷನ್ ಫಾರ್ಮ್ ಭರ್ತಿ ಮಾಡಿದ ಸಿಎಂ ಡಿಕೆಶಿ




