ಹಾಸನ : ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯಲ್ಲಿ ಶೋಕಾಂತಿಕ ಘಟನೆ ನಡೆದಿದ್ದು, 19 ವರ್ಷದ ಸಂಧ್ಯಾ ಎಂಬ ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್ ಹಾಗೂ ಪೂರ್ಣಿಮ ದಂಪತಿಗಳ ಮಗಳು ಸಂಧ್ಯಾ, ಡಿಪ್ಲೊಮೋ ಅಂತಿಮ ವರ್ಷದ ಶಿಕ್ಷಣವನ್ನು ಇತ್ತೀಚೆಗಷ್ಟೆ ಪೂರ್ಣಗೊಳಿಸಿದ್ದಳು. ಇನ್ನು ಬಾತ್ರೂಮ್ಗೆ ತೆರಳಿದ್ದ ವೇಳೆ ಸಂಧ್ಯಾ ಅಚಾನಕ್ ಕುಸಿದು ಬಿದ್ದಿದ್ದಾಳೆ. ಆತಂಕಗೊಂಡ ಪೋಷಕರು ಬಾತ್ರೂಮ್ ಬಾಗಿಲು ಒಡೆದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದ್ದರು. ಆದರೆ ಅಷ್ಟರಲ್ಲಿ ಸಂಧ್ಯಾ ಮೃತಪಟ್ಟದ್ದಳು.
ಸಂಧ್ಯಾ ಇತ್ತೀಚಿನ ಕೆಲವು ವರ್ಷಗಳಿಂದ ಬಿಪಿ (ರಕ್ತದೊತ್ತಡ) ಮತ್ತು ಶುಗರ್ (ಮಧುಮೇಹ) ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಇದರಿಂದಾಗಿ ಆಕೆ ತೀವ್ರ ಹೃದಯಾಘಾತಕ್ಕೊಳಗಾದ ಸಾಧ್ಯತೆ ಇದೆ ಎಂದು ವೈದ್ಯಕೀಯ ವೃತ್ತಪತ್ರಿಕೆಗಳು ಶಂಕೆ ವ್ಯಕ್ತಪಡಿಸಿವೆ.
ಈ ಹೃದಯವಿದ್ರಾವಕ ಘಟನೆ ಪಟ್ಟಣದಲ್ಲಿ ತೀವ್ರ ಸಂತಾಪವನ್ನುಂಟುಮಾಡಿದ್ದು, ಸಂಧ್ಯಾಳ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ವೈದ್ಯಕೀಯ ಪರೀಕ್ಷೆ ಮುಂದುವರಿದಿದೆ.