ಗೌರಿಬಿದನೂರು :
ದೇಶಕ್ಕೆ ಅನ್ನ ಕೊಡೊ ರೈತನ ಪರಿಸ್ಥಿತಿ ದಿನದಿಂದ ದಿನಕ್ಕೆ ಹೀನಾಯ ಸ್ಥಿತಿಗೆ ತಲುಪುತ್ತಿದೆ. ಒಮ್ಮೆ ಮಳೆ ಕೈಕೊಟ್ಟರೆ, ಮತ್ತೊಮ್ಮೆ ಉತ್ತಮ ಬೆಳೆ ಇದ್ದರೂ ಕೂಡ ಬೆಲೆ ಸರಿಯಾಗಿ ಸಿಗದ ಹಿನ್ನೆಲೆ ಅನ್ನದಾತ ಕಂಗಾಲಾಗುತ್ತಿದ್ದಾನೆ. ಸಾಲ ಸೋಲ ಮಾಡಿ ಬೆಳೆ ಬೆಳೆದರೆ, ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ. ತಾನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆ ನೊಂದ ಯುವ ರೈತನೋರ್ವ ಸ್ವಂತ ಜಮೀನಿನಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯುವ ರೈತ ಪವನ್ ಕುಮಾರ್ ಎಂಬಾತ ಕೃಷಿಯಲ್ಲಿ ಏನಾದರೂ ಮಾಡಬೇಕು ಎಂಬ ಹಠ ಇಟ್ಟುಕೊಂಡು ಕೃಷಿಗೆ ಕೈ ಹಾಕಿದ್ದ. ಕಳೆದ ಮೂರು ವರ್ಷದಿಂದ ವ್ಯವಸಾಯದಲ್ಲಿ ತಂದೆಗೆ ಪವನ್ ಸಹಾಯ ಮಾಡ್ತಾ ಇದ್ದ. ಸಾಲ ಮಾಡಿ ಉಳುಮೆ ಮಾಡಿದ್ದ ಯುವ ರೈತ ಪವನ್. ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆ ಕಂಗಾಲಾಗಿದ್ದಾನೆ. ಬ್ಯಾಂಕ್ ಹಾಗೂ ಸಂಬಂಧಿಕರ ಬಳಿ ಪವನ್ ಸಾಲ ಮಾಡಿ ಬೇಸಾಯ ಮಾಡಿದ್ದ, ಆದರೆ ಶ್ರಮಕ್ಕೆ ಫಲ ಸಿಗದೇ ಬೇಸತ್ತ ಯುವ ರೈತ ಜಮೀನಿನಲ್ಲೇ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ತಹಶೀಲ್ದಾರ್ ಮಹೇಶ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.