ಗುಬ್ಬಿ :
ಒಂದು ಸಮಾಜ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ ಇಂದಿನ ಯುವ ಪೀಳಿಗೆಯು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕೆಂದು ಶ್ರೀ ಷಡಕ್ಷರಿ ಮಹಾಸ್ವಾಮಿಗಳು ಗುಬ್ಬಿಯಲ್ಲಿ ತಿಳಿಸಿದರು.
ತಾಲೂಕಿನ ಕಡಬ ಹೋಬಳಿಯ ಮೇಳೆಕಲ್ಲಹಳ್ಳಿ ಗ್ರಾಮದಲ್ಲಿ ನಡೆದ ಚಿಕ್ಕಪುರದಮ್ಮ ದೇವಿಯ ನೂತನ ದೇವಸ್ಥಾನದ ಕಳಸ ಮತ್ತು ವಿಗ್ರಹ ಪ್ರತಿಷ್ಠಾಪನ ಮಹೋತ್ಸವವನ್ನು ನೆರವೇರಿಸಿ ಮಾತನಾಡಿದ ಅವರು, ದೇವಾಲಯಗಳನ್ನು ಮನುಷ್ಯನ ಮನ ಸಂತೃಪ್ತಿಗಾಗಿ ನಿರ್ಮಿಸಬೇಕೆ ಹೊರತು ಆಡಂಬರಕ್ಕಲ್ಲ. ನಮ್ಮ ಸಮಾಜವು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಪ್ರಜ್ಞಾವಂತರಾಗಬೇಕು. ಶಿಕ್ಷಣವಂತರಾದರೆ ಆರ್ಥಿಕವಾಗಿ, ಸಾಮಾಜಿಕವಾಗಿ ನಾವು ಸದೃಢರಾಗುತ್ತೇವೆ ಎಂದರು.
ಮೇ 5 ರಿಂದ ಜಾತಿಗಣತಿಯು ಪ್ರಾರಂಭವಾಗಲಿದ್ದು, ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಆದಿ ಕರ್ನಾಟಕ, ಆದಿ ದ್ರಾವಿಡ, ಹರಿಜನ, ಮಾದರ, ಎಂಬ ಪದ ಬಳಸದೆ ಮಾದಿಗ ಎಂದು ನಮೂದಿಸಬೇಕು ಎಂದು ಸಮುದಾಯದ ಮುಖಂಡರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ತಾಲೂಕು ಸಂಚಾಲಕ ಕಡಬ ಶಂಕರ್, ಮುಖಂಡರಾದ ನಟರಾಜು, ಈಶ್ವರಯ್ಯ, ಮಹೇಶ್, ಅಂಜಿನಪ್ಪ ಸೇರಿದಂತೆ ಮೇಳೆಕಲ್ಲಹಳ್ಳಿ ಗ್ರಾಮಸ್ಥರು ಹಾಜರಿದ್ದರು.