ಪಾವಗಡ : ಪಾವಗಡ ಅಂದ್ರೆ ಸಮಸ್ಯೆ, ಸಮಸ್ಯೆ ಅಂದ್ರೆ ಪಾವಗಡ ಅನ್ನುವಂತಾಗಿದೆ ಆ ತಾಲೂಕಿನ ಪರಿಸ್ಥಿತಿ, ಒಂದು ಕಡೆ ಅಭಿವೃದ್ಧಿಯ ಕೆಲಸಗಳು ಆಗ್ತಿವೆ ಅನ್ನೊ ಮಾತು ಕೇಳಿಬರ್ತಿದ್ರೆ. ಇನ್ನೊಂದು ಕಡೆ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಅಂತ ಜನ ಆರೋಪಿಸುತ್ತಿದ್ದಾರೆ. ಪಾವಗಡ ಅಂದ್ರೆ ತಟ್ಟನೇ ನೆನಪಾಗೋದು ಕ್ಲೋರೈಡ್ ನೀರು. ಇಂತಹ ಪರಿಸ್ಥಿತಿಯಲ್ಲಿ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಕೊಡುವ ಜವಾಬ್ದಾರಿ ಅಧಿಕಾರಿಗಳದ್ದು, ಆದ್ರೆ ಅಧಿಕಾರಿಗಳು ಯಾಕೋ ಕ್ಯಾರೇ ಎನ್ನುತ್ತಿಲ್ಲವಂತೆ ಹೀಗಾಗಿ ಅಲ್ಲಿನ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಬೆಸ್ಕಾಂ ಹಾಗೂ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.
ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ನವಗ್ರಾಮ ವ್ಯಾಪ್ತಿಯಲ್ಲಿನ ಜನರಿಗೆ ಕಳೆದ 15 ದಿನಗಳಿಂದ ನೀರು ಬಿಡ್ತಿಲ್ಲವಂತೆ. ಇದ್ರಿಂದ ತಮ್ಮ ದಿನನಿತ್ಯ ಕೆಲಸಗಳಿಗೂ ತೊಂದರೆಯಾಗ್ತಿದೆ. ಕಿ.ಮೀಟರ್ ಗಟ್ಟಲೇ ನಡೆದುಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಅಂತ ಗೃಹಿಣೀಯರು ಪಂಚಾಯಿತಿ ಹಾಗೂ ಬೆಸ್ಕಾಂ ಕಚೇರಿ ಮುಂದೆ ಖಾಲಿ ಕೊಡ ಹಿಡಿದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬರುವವರೆಗೆ ನಾವು ಇಲ್ಲಿಂದ ಜಾಗ ಖಾಲಿ ಮಾಡೊಲ್ಲ ಅಂತ ಪಟ್ಟು ಹಿಡಿದ್ರು.
ಇನ್ನು ತತಕ್ಷಣವೇ ನವಗ್ರಾಮದ ವ್ಯಾಪ್ತಿಯಲ್ಲಿರುವಂತ ಮನೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ರು. ನೀರು ಬಿಡೋಕೆ ಕರೆಂಟ್ ಸಮಸ್ಯೆ ಇದೆ ಅಂತ ಅಧಿಕಾರಿಗಳು ಹೇಳ್ತಿದಾರೆ. ಹೀಗಿರುವಾಗ ನಾವು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು ಮಹಿಳೆಯರು. ಈ ಪ್ರತಿಭಟನೆಯಲ್ಲಿ ಮಂಜುಳಮ್ಮ, ದುರ್ಗಮ್ಮ, ಮಲ್ಲಿಕಮ್ಮ , ಗಂಗಮ್ಮ, ಶಾಂತಮ್ಮ ಹನುಮಂತರಾಯ ಇತರರು ಹಾಜರಿದ್ರು.