ಕೊರಟಗೆರೆ:
ಕೊರಟಗೆರೆ ತಾಲೂಕಿನ ಗೌರಿಕಲ್ಲು, ಬುಕ್ಕಾಪಟ್ಟಣ, ಚೀಲಗಾನಹಳ್ಳಿ, ಇರಕಸಂದ್ರ ಕಾಲೋನಿ ಮತ್ತು ಜೆಟ್ಟಿಅಗ್ರಹಾರ ಸಮೀಪ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಿದ್ದು ಅನ್ನದಾತರನ್ನು ಕೆರಳಿಸುವಂತೆ ಮಾಡಿದೆ. ಚೀಲಗಾನಹಳ್ಳಿಯ ಸರ್ವೇ ನಂಬರ್ 21ರಲ್ಲಿ ಬೆಂಗಳೂರು ಹಾಗೂ ತುಮಕೂರು ಮೂಲದ 10 ಮಂದಿಗೆ 2014ರಲ್ಲಿಯೇ ತಲಾ 5 ರಿಂದ 6 ಎಕರೆ ಭೂಮಿಯನ್ನು ಗಣಿಗಾರಿಕೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಜೂರು ಮಾಡಿದೆ. ಅಲ್ಲದೇ ಚೀಲಗಾನಹಳ್ಳಿ ಸಮೀಪದಲ್ಲಿ ಅರಣ್ಯ ಪ್ರದೇಶ ಮತ್ತು ಕೆರೆಕಟ್ಟೆ ಇದ್ದರು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸ್ಥಳ ಪರಿಶೀಲನೆ ನಡೆಸದೇ ಅನಧಿಕೃತವಾಗಿ ಭೂಮಿ ಮಂಜೂರು ಮಾಡಿದ್ದು ಗಣಿಗಾರಿಕೆ ನಡೆಸದಂತೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಸ್ಥಾಪನೆಗೆ ಚೀಲಗಾನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕಳೆದ 10 ವರ್ಷದಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರ್ತಿದ್ದಾರೆ. ಆದರೂ ಕೂಡ ಗಣಿಗಾರಿಕೆಗೆ ಮುಂದಾಗಿದ್ದು, ರೈತ ಸಂಘ, ಹಸಿರು ಸೇನೆ ಮತ್ತು ಚೀಲಗಾನಹಳ್ಳಿ ಗ್ರಾಮದ ರೈತರು ಟ್ರ್ಯಾಕ್ಟರ್ ಮೂಲಕ ಕೊರಟಗೆರೆ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಗಣಿಗಾರಿಕೆ ನಡೆಸುವ ಸುತ್ತಲೂ ಅರಣ್ಯ ಪ್ರದೇಶ, ಜಮೀನು ಇದ್ದು ಸಾಕಷ್ಟು ತೊಂದರೆ ಆಗಲಿದೆ. ಅಲ್ಲದೇ ಕೊರಟಗೆರೆಯನ್ನು ಮಿನಿ ಬಳ್ಳಾರಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಣಿಗಾರಿಕೆಗೆ ಅನುಮತಿ ನೀಡಿದ್ದು ಗಣಿಗಾರಿಕೆಗೆ ಹೋಗಲು ರಸ್ತೆಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಕೂಡಲೇ ಗೃಹಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ.
ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದು ಮಾಡುವ ತನಕ ರೈತರ ಸಂಘ, ಹಸಿರು ಸೇನೆ, ಸ್ಥಳೀಯ ರೈತರು ಅನಿರ್ಧಿಷ್ಟವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಅದ್ಯಾವ ತಿರುವು ಪಡೆದುಕೊಳ್ಳುತ್ತೋ ಕಾದುನೋಡಬೇಕಿದೆ.