ಪಾವಗಡ:
ಗಡಿ ತಾಲೂಕಾದ ಪಾವಗಡದ ಹಲವು ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿ ಶೋಚನೀಯವಾಗಿವೆ. ಗಡಿ ತಾಲೂಕಿನ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗದೇ, ಶಿಕ್ಷಣಕ್ಕೆ ಮಾರಕವಾಗ್ತಿದೆ. ಇಲ್ಲಿನ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದೆ. ಇದಕ್ಕೆ ಸ್ಪಷ್ಟ ಸಾಕ್ಷ್ಯದಂತಿದೆ ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಸರ್ಕಾರಿ ಶಾಲೆಯ ದುಸ್ಥಿತಿ.
ಪಾವಗಡ ತಾಲೂಕಿನ ವೀರುಪಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಗೌಡೇಟಿ ಸರ್ಕಾರಿ ಶಾಲೆಯಲ್ಲಿ ಸುಮಾರು 80 ಮಂದಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡ್ತಾ ಇದ್ದಾರೆ. ಶಾಲೆಗೆ ಸುಸಜ್ಜಿತವಾದ ಕಟ್ಟಡ ಏನೋ ಇದೆ. ಆದ್ರೆ ಸ್ವಚ್ಛತೆ ಮರೀಚಿಕೆ ಆಗಿದೆ. ಶಾಲಾ ಆವರಣದಲ್ಲಿ ಕಸದ ರಾಶಿ ಹಾಗೂ ಅಸ್ವಚ್ಛ ನೀರು ಹರಿಯುತ್ತಿದ್ದು, ಗಬ್ಬು ನಾರುತ್ತಿದೆ, ಕೆಟ್ಟ ವಾಸನೆಯಲ್ಲೇ ಮಕ್ಕಳು ಪಾಠ ಕೇಳುವ ದುಸ್ಥಿತಿ ಇದೆ. ಇದಲ್ಲದೇ ಮಕ್ಕಳಿಗೆ ಶೌಚಾಲಯದ ಕೊರತೆ ಹೆಚ್ಚಾಗಿದೆ. ಶೌಚಾಲಯದ ಕಟ್ಟಡವನ್ನು ಅರ್ಧಕ್ಕೆ ನಿಲ್ಲಿಸಿದ್ದು ಮಕ್ಕಳು ಬಯಲಲ್ಲೇ ಶೌಚಕ್ಕೆ ಹೋಗುವ ಕೆಟ್ಟ ಪರಿಸ್ಥಿತಿ ಇದೆ, ಇದ್ರಿಂದ ಅಕ್ಕಪಕ್ಕದಲ್ಲಿ ದುರ್ವಾಸನೆ ಬೀರುವಂತಹ ಸ್ಥಿತಿ ನಿರ್ಮಾಣ ಆಗಿದೆ. ಜೊತೆಗೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ನೀರು ಪೂರೈಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ.
ಇನ್ನು ಇಷ್ಟೆಲ್ಲಾ ಸಮಸ್ಯೆ ತಾಂಡವ ಆಡ್ತಾ ಇದ್ರು, ಶಾಲೆಗೆ ಶಿಕ್ಷಣಾಧಿಕಾರಿಗಳಾಗಲಿ, ಸಿಆರ್‌ಪಿ ಅಧಿಕಾರಿಗಳಾಗಲಿ ಶಾಲೆಗೆ ಇಷ್ಟು ವರ್ಷ ಆದ್ರು ಭೇಟಿ ನೀಡಿಲ್ವಂತೆ.. ತಕ್ಷಣ ಅಧಿಕಾರಿಗಳು ಭೇಟಿ ನೀಡಿ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸ್ತಾ ಇದ್ದಾರೆ.