ತಿಪಟೂರು:
ಎಸಿ ಕೋರ್ಟ್ ಆವರಣದಲ್ಲಿಯೇ ಸರ್ಕಾರಿ ಶಾಲೆಯ ಶಿಕ್ಷಕ ಗೂಂಡಾಗಿರಿ ನಡೆಸಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಉರ್ದು ಶಾಲೆಯ ಶಿಕ್ಷಕನಾಗಿರೋ ಮಂಜಪ್ಪ ಎಂಬಾತ, ಕರ್ತವ್ಯದ ಸಮಯದಲ್ಲಿ ರಜೆ ಹಾಕದೇ ಎಸಿ ಕೋರ್ಟ್‌ಗೆ ಹಾಜರಾಗಿದ್ದಲ್ಲದೇ, ತಮ್ಮ ವಿರುದ್ಧ ತೀರ್ಪು ಬಂತು ಅನ್ನೋ ಕಾರಣಕ್ಕೆ ಎದುರಾಳಿ ಪಾರ್ಟಿಯ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಿಪಟೂರು ಎಸಿ ಕಚೇರಿ ಆವರಣದಲ್ಲಿಯೇ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.
ತಿಪಟೂರು ನಗರದ ಗಾಂಧಿನಗರದ ಸರ್ಕಾರಿ ಉರ್ದು ಶಾಲೆಯ ಶಿಕ್ಷಕನಾಗಿರೋ ಮಂಜಪ್ಪ ಹಾಗೂ ರಾಕೇಶ್, ಉದಯ್ ಎಂಬುವವರ ನಡುವೆ ಗಲಾಟೆ ನಡೆದಿದೆ. ಮಂಜಪ್ಪ ಮತ್ತು ಈ ರಾಕೇಶ್ ಮತ್ತು ಉದಯ್ ತಂದೆಯ ನಡುವೆ ಜಮೀನು ವ್ಯಾಜ್ಯ ನಡೆಯುತ್ತಿತ್ತು. ಈ ಸಂಬಂಧ ಇವತ್ತು ಎಸಿ ಕೋರ್ಟ್‌ನಲ್ಲಿ ವಿಚಾರಣೆ ಇತ್ತು. ಜೊತೆಗೆ ಈ ಪ್ರಕರಣದಲ್ಲಿ ಇವತ್ತು ತೀರ್ಪು ಕೂಡ ಪ್ರಕಟವಾಗಿದ್ದು, ಮಂಜಪ್ಪ ವಿರುದ್ಧ ತೀರ್ಪು ಬಂದಿತ್ತು ಎನ್ನಲಾಗಿದೆ. ತಮ್ಮ ವಿರುದ್ಧ ತೀರ್ಪು ಬಂತು ಅನ್ನೋ ಕಾರಣಕ್ಕೆ ಈ ಮಂಜಪ್ಪ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಇನ್ನು ಈತ ಶಾಲೆಯಲ್ಲಿ ರಜೆಯನ್ನೂ ಹಾಕದೇ ಕರ್ತವ್ಯದ ಸಮಯದಲ್ಲೇ ಕೋರ್ಟ್‌ಗೆ ಹಾಜರಾಗಿದ್ದಾನೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಜೊತೆಗೆ ಈತ ಸರಿಯಾಗಿ ಶಾಲೆಗೆ ಹೋಗೋದೇ ಇಲ್ವಂತೆ. ಯಾವಾಗಲೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ರಾಜಕೀಯ ವ್ಯಕ್ತಿಗಳ ಜೊತೆ ಓಡಾಟ ನಡೆಸುತ್ತಿರುತ್ತಾನೆ ಅಂತಲೂ ಕೆಲವರು ಆರೋಪಿಸಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದವರು ದೂರು ನೀಡಲು ಹೋದ್ರೆ ಎಫ್‌ಐಆರ್ ದಾಖಲಿಸಿಕೊಳ್ಳೋದಕ್ಕೂ ಪೊಲೀಸರು ಹಿಂದೇಟು ಹಾಕಿದ್ದಾರಂತೆ.