ಪಾವಗಡ : ಪಾವಗಡದಲ್ಲಿ ನೀರು ಪೋಲು | ಅಧಿಕಾರಿಗಳು ಡೋಂಟ್‌ ಕೇರ್

ಪಾವಗಡ : ಪಾವಗಡ ಅಂದರೆ ನಮಗೆ ನೆನಪಾಗೋದು ಬರದ ನಾಡು ಅಂತ. ಇಂತಹ ಬರದ ನಾಡಲ್ಲಿ ಕುಡಿಯುವ ನೀರಿನದ್ದು ದೊಡ್ಡ ಸಮಸ್ಯೆ. ಈ ತಾಲೂಕಿನಲ್ಲಿ ವಾಸಿಸುವ ಜನರು ಕ್ಲೋರೈಡ್‌ಯುಕ್ತ ನೀರನ್ನೆ ಕುಡಿದು ಬದುಕುತ್ತಿದ್ದಾರೆ. ಕುಡಿಯುವ ನೀರಿಗೆ, ದಿನನಿತ್ಯ ಬಳಸುವ ನೀರಿಗೆ ಬರವಿರುವ ತಾಲೂಕಿನಲ್ಲಿ ನೀರು ಪೋಲಾಗುತ್ತಿರುವುದು ಶೋಚನೀಯ ಸಂಗತಿ. ಇದನ್ನ ಕಂಡು ಕೂಡ ಅಧಿಕಾರಿಗಳು ಜಾಣ ಕುರುಡುತನ ತೋರುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ಹೌದು, ಪಾವಗಡ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟಿದೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ. ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗ ಮತ್ತು ಜ್ಞಾನಭೋದಿನಿ ಶಾಲೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ನೀರು ಪೋಲಾಗುತ್ತಿರುವುದು ಕಂಡುಬಂದಿದೆ. ಚರಂಡಿಯ ಪಕ್ಕದಲ್ಲಿನ ನೀರಿನ ಪೈಪ್‌ ಹೊಡೆದು ಹಲವು ದಿನಗಳಿಂದ ಚರಂಡಿಗೆ ನೀರು ಹರಿಯುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ತಾಲೂಕಿನ ಹಲವು ಗ್ರಾಮಗಳಲ್ಲಿ ಇಂದಿಗೂ ಕೂಡ ಕುಡಿಯುವ ನೀರು ಹಾಗೂ ದಿನನಿತ್ಯ ಬಳಸುವ ನೀರಿಗೆ ಬರವಿದೆ. ಜನರು ಪ್ರತಿನಿತ್ಯ ಕಿಲೋಮೀಟರ್‌ ಗಟ್ಟಲೆ ಹೋಗಿ ನೀರು ತಂದು ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ನಗರದಲ್ಲಿಯೇ ಲೀಟರ್ ಗಟ್ಟಲೇ ಹಲವು ದಿನಗಳಿಂದಲೂ ನೀರು ಪೋಲಾಗುತ್ತಿರುವುದು ದುರದೃಷ್ಟಕರ ಸಂಗತಿ. ಮತ್ತೊಂದು ಕಡೆ ಕೆಲವು ಪ್ರಭಾವಿಗಳು ಬಹುತೇಕ ನೀರಿನ ಘಟಕಗಳನ್ನ ನಿರ್ಮಾಣ ಮಾಡಿಕೊಂಡು, ಸರ್ಕಾರದ ಯಾವುದೇ ಅನುಮತಿ ಇಲ್ಲದೆ ನೀರು ಮಾರಾಟ ಮಾಡುತ್ತಿದ್ದಾರೆ. ಇಂತಹ ವಾಟರ್‌ ಮಾಫಿಯಾ ಅಧಿಕಾರಿಗಳು ಕಡಿವಾಣ ಹಾಕುವ ಕೆಲಸ ಮಾಡಬೇಕೆಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯವನ್ನು ಬದಿಗಿಡಬೇಕಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಾಲೂಕಿನ ಜನರಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದ್ರೆ ಈ ರೀತಿಯಾಗಿ ನೀರು ಪೋಲಾಗುತ್ತಿರುವುದು ದುರದೃಷ್ಟಕರ. ಹಲವು ದಿನಗಳಿಂದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮತ್ತು ಜ್ಞಾನಬೋದಿನಿ ಶಾಲೆಯ ಪಕ್ಕದಲ್ಲಿ ಪೋಲಾಗುತ್ತಿರುವ ನೀರನ್ನು ತಡೆಯಬೇಕಿದೆ. ಇಲ್ಲವಾದಲ್ಲಿ ನಗರದಲ್ಲಿ ನೀರಿನ ಹಾಹಾಕಾರವಾಗಿ ಜನರು ನರಳುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ.

 

Author:

...
Keerthana J

Copy Editor

prajashakthi tv

share
No Reviews