ಪಾವಗಡ :
ಪಾವಗಡ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅಭಿವೃದ್ಧಿ ಕಾಣದ ಬರದ ನಾಡು ಅಂತ. ಇಂತಹ ತಾಲೂಕಿನಲ್ಲಿ ಇಂದಿಗೂ ಸಮಸ್ಯೆಗಳು ಕಡಿಮೆಯಾಗಿಲ್ಲ. ಇಲ್ಲಿನ ಅಧಿಕಾರಿಗಳು ಎಷ್ಟರಮಟ್ಟಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಈ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಸಿಸಿ ರಸ್ತೆ ಅದ್ವಾನ ಎದ್ದು, ನೀರು ನಿಲ್ಲುತ್ತಿತ್ತು. ಈ ತೊಂದರೆಯನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಗ್ರಾಮಕ್ಕೆ ಬಂದ ಅಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸದೆ ನಿಂತ ನೀರಿನ ಮೇಲೆಯೇ ಮಣ್ಣನ್ನು ಹಾಕಿ ನಿರ್ಲಕ್ಷ್ಯ ತೋರಿದ್ದಾರೆ.
ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಸಿಸಿ ರಸ್ತೆ ಹದಗೆಟ್ಟಿತ್ತು. ಸುರಿದ ಮಳೆಯಿಂದಾಗಿ ಸಿಸಿ ರಸ್ತೆಯ ಮೇಲೆ ನೀರು ನಿಲ್ಲುತ್ತಿತ್ತು. ನಿಂತ ನೀರಿನಿಂದಾಗಿ ಗ್ರಾಮಸ್ಥರು ಓಡಾಡಲು ಪರದಾಡುತ್ತಿದ್ದರು. ಜೊತೆಗೆ ರಸ್ತೆಯ ಅಕ್ಕಪಕ್ಕದಲ್ಲಿ ವಾಸಿಸುವ ಜನರಿಗೆ ನಿಂತ ನೀರಿನಿಂದಾಗಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಪಿಡಿಓಗೆ ಮನವಿ ಮಾಡಿದ್ದಾರೆ. ಆದರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಹದಗೆಟ್ಟ ರಸ್ತೆಯ ಮೇಲೆಯೇ ಮಣ್ಣನ್ನು ಹಾಕಿ ಕಾಟಾಚಾರದ ಕೆಲಸ ಮಾಡಿದ್ದಾರೆ.
ಇನ್ನು ರಸ್ತೆಯ ಮೇಲೆ ನಿಂತಿದ್ದ ನೀರಿನ ಸಮಸ್ಯೆಯನ್ನು ಸರಿಪಡಿಸದೆ ಮಣ್ಣನ್ನು ಹಾಕಿ ಕೈತೊಳೆದುಕೊಂಡಿದ್ದಾರೆ. ಇಂತಹ ಕಾಟಾಚಾರದ ಕೆಲಸ ಮಾಡುವುದು ಎಷ್ಟು ಸರೀ. ಅಧಿಕಾರಿಗಳೇ ಇನ್ನಾದರೂ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.