ವಿಜಯಪುರ :
ಉತ್ತರ ಭಾರತದಲ್ಲಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆಯಾದಂಥಹ ಅನೇಕ ಘಟನೆಗಳು ಜರುಗಿವೆ. ಆದ್ರೆ ಇಂತಹ ಅಮಾನುಷ ಹಲ್ಲೆಯನ್ನು ನಾವು ಹಿಂದೆದೂ ಕಂಡಿಲ್ಲ, ಯಾವ ತಪ್ಪು ಮಾಡಿಲ್ಲ, ಅಥವಾ ಏನನ್ನು ಕದ್ದಿಲ್ಲ ಆದರೆ ಕೆಲಸಕ್ಕೆ ಲೇಟಾಗಿ ಬಂದಿದ್ದಾರೆ ಎಂಬ ನೆಪಕ್ಕೇ ಕೈ ಕಾಲು ಕಟ್ಟಿ, ಕಾಲಿನ ಪಾದಗಳಿಗೆ ಪೈಪ್‌ಗಳಿಂದ ಹಿಗ್ಗಾಮುಗ್ಗಾ ಒಡೆದಿದ್ದಾರೆ, ಅಯ್ಯೋ, ಅಪ್ಪಾ. ಬಿಟ್ಟು ಬಿಡಿ ಎಂದು ಗೋಗರೆದ್ರು ಕರುಣೆ ತೋರದ ಮೃಗಗಳು ಹಲ್ಲೆ ಮಾಡಿದ್ದಾರೆ. ಇಂತಹ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ, ಈ ಘಟನೆಯಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ.
ಗುಮ್ಮಟ ನಗರಿ ವಿಜಯಪುರ ಪಟ್ಟಣದಲ್ಲಿ ಇಡೀ ಸಮಾಜವೇ ಬೆಚ್ಚಿ ಬೀಳುವಂತಹ ಘಟನೆಗೆ ಸಾಕ್ಷಿಯಾಗಿದೆ. ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರೋ ಇಟ್ಟಂಗಿ ಭಟ್ಟಿಯಲ್ಲಿ ಮಾಲೀಕ ತನ್ನ ಕಾರ್ಮಿಕನ ಮೇಲೆ ದರ್ಪ ತೋರಿದ್ದು , ಜಮಖಂಡಿಯ ಚಿಕ್ಕಲಿಕಿ ಗ್ರಾಮದ ಸದಾಶಿವ ಮಾದರ್, ಸದಾಶಿವ ಬಬಲಾದಿ, ಉಮೇಶ ಮಾದರ್ ಎಂಬುವವರ ಕೈ ಕಾಲುಗಳನ್ನು ಕಟ್ಟಿ ಹಾಕಿ, ಪಾದಗಳಿಗೆ ಪೈಪ್‌ಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಕಾರ್ಮಿಕರು ಸದ್ಯ ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಬ್ಬಕ್ಕೆಂದು ಈ ಮೂವರು ಕಾರ್ಮಿಕರು ಅಡ್ವಾನ್ಸ್ ದುಡ್ಡನ್ನು ಪಡೆದುಕೊಂಡು ಊರಿಗೆ ಹೋಗಿದ್ದರು, ಆದ್ರೆ ಊರಿಂದ ಕೆಲಸಕ್ಕೆ ಬರುವುದು ತಡವಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಾಲೀಕ ಕಾರ್ಮಿಕರೊಂದಿಗೆ ಹಲ್ಲೆ ನಡೆಸಿದ್ದಾನೆ. ಇನ್ನು ಮಾಲೀಕ ಕೊಡುವ ಒಂದೊಂದು ಏಟಿಗೂ ನಲುಗಿದ ಕಾರ್ಮಿಕರು ಅಯ್ಯೋ. ಅಮ್ಮಾ.. ಬಿಟ್ಟುಬಿಡಿ ಎಂದು ಗೋಗರೆದ್ರು ಕೂಡ ಮನಸ್ಸು ಕರಗದ ಮಾಲೀಕ ಹಲ್ಲೆಯನ್ನು ಮುಂದುವರೆಸಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಹಲ್ಲೆಯ ವಿಡಿಯೋ ವೈರಲ್ ಆಗ್ತಿದ್ದಂತೆ ಸಿಎಂ ಸಿದ್ದರಾಮಯ್ಯ ವಿಜಯಪುರ ಡಿಸಿ ಭೂಬಾಲನ್ ಅವರಿಂದ ಮಾಹಿತಿ ಪಡೆದಿದ್ದು, ಹಲ್ಲೆ ಮಾಡಿರೋ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ .