GOKARNA : ಗೋಕರ್ಣದ ಗಂಗಾವಳಿ ನದಿಯ ಸೇತುವೆಯ ತಡೆಗೋಡೆ ಮೇಲೆ ಚಿಕ್ಕ ಮಗುವಿನೊಂದಿಗೆ ಪ್ರವಾಸಿಗರು ನಿಂತು ವೀಕ್ಷಿಸುತ್ತಿರುವುದನ್ನು ಕ್ಯಾಮರಾ ಮೂಲಕ ಗಮನಿಸಿದ ಪೊಲೀಸ್ ಸಿಬ್ಬಂದಿ ತಕ್ಷಣ ಎಚ್ಚರಿಕೆ ನೀಡಿದ್ದು, ಇದರಿಂದ ಪ್ರವಾಸಿಗರು ಎಚ್ಚೆತ್ತುಕೊಂಡ ಘಟನೆ ನಡೆದಿದೆ. ಈ ವಿಡಿಯೋ SOCIAL MEDIA ದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ಅತ್ಯಾಧುನಿಕ ವ್ಯವಸ್ಥೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.
ಅಂಕೋಲಾದಿಂದ [Ankola] ಗೋಕರ್ಣಕ್ಕೆ ತೆರಳುತ್ತಿರುವ ಪ್ರವಾಸಿಗರು ಗಂಗಾವಳಿಯ ಸೇತುವೆಯ ಮೇಲೆ ಕಾರನ್ನು ನಿಲ್ಲಿಸಿ, SELFIE ಫೋಟೋ ತೆಗೆಯುವ ಸಮಯದಲ್ಲಿ ಚಿಕ್ಕ ಮಗುವನ್ನು ತಡೆಗೋಡೆಯ ಮೇಲೆ ನಿಲ್ಲಿಸಿಕೊಂಡಿದ್ದರು. ಇದನ್ನು ಕ್ಯಾಮರಾ ಮೂಲಕ ಗಮನಿಸಿದ ಗೋಕರ್ಣ ಪೊಲೀಸರು ಕ್ಯಾಮರಾ ಸ್ಪೀಕರ್ ಮೂಲಕ ಸುರಕ್ಷಿತವಾಗಿ ಮಗುವನ್ನು ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ.
ಈ ಶಬ್ದ ಕೇಳಿ ತಕ್ಷಣ ಎಚ್ಚೆತ್ತ ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ. ತೀರಾ ಅಪಾಯಕಾರಿ ಪ್ರದೇಶದಲ್ಲಿ ಮಗು ನಿಲ್ಲಿಸಿ, ಫೋಟೋ ತೆಗೆಯಲು ಮುಂದಾಗಿದ್ದ ದಂಪತಿ ಕೊನೆಗೆ ವಾಪಸ್ ಆಗಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಈ ಮಹತ್ಕಾರ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು VIRAL ಆಗಿದೆ.