ಉಡುಪಿ:
ಉಡುಪಿ ಜಿಲ್ಲೆಯ ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗಣಪನಕಟ್ಟೆ ತಿರುವಿನ ಬಳಿ ಟಿಪ್ಪರ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕ ಬೈಂದೂರು ಗ್ರಾಮದ ಸುಬ್ರಮಣ್ಯ ಆಚಾರ್ಯ (40) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮುಂಜಾನೆ ಬೈಂದೂರಿನಿಂದ ಪಳ್ಳಿಯ ಕೋರೆಗೆ ಜಲ್ಲಿ ತರಲು ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಪಲ್ಟಿಯಾಗಿದ್ದು, ಪರಿಣಾಮ ಚಾಲಕ ಟಿಪ್ಪರ್ ಅಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಸ್ಥಳೀಯರು ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಪೊಲೀಸ್ ಸಿಬ್ಬಂದಿ ಸಹಾಯದಿಂದ ಜೆಸಿಬಿ ಮೂಲಕ ಟಿಪ್ಪರ್ ಲಾರಿಯನ್ನು ಎತ್ತಿ ಚಾಲಕನ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶಿರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.