ಗ್ರಾಮಸ್ಥರುತುಮಕೂರು
ತುಮಕೂರು: ತುರುವೇಕೆರೆ ತಾಲೂಕಿನ ಸೀಗೆಹಳ್ಳಿ ಬಳಿಯ ಚಟ್ಟನಹಳ್ಳಿಯ ಶ್ರೀ ಹನುಮಂತರಾಯ ಸ್ವಾಮಿ ಮತ್ತು ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡದ ಇಬ್ಬರು ಪೂಜಾರಿಗಳನ್ನು ತಹಶೀಲ್ದಾರ್ ಕುಂ. ಈ ಅಹಮದ್ ಅಮಾನತು ಮಾಡಿದ್ದಾರೆ.
ಚಟ್ಟನಹಳ್ಳಿಯ ಹನುಮಂತ ರಾಯ ಸ್ವಾಮಿ ದೇವಾಲಯದ ಪೂಜಾರಿ ವೆಂಕಟೇಶ್ ನಿತ್ಯ ದೇವರ ಪೂಜೆ ಮಾಡದೇ ಚಟಗಳಿಗೆ ಬಲಿಯಾಗಿದ್ದೂ, ಯಾವಾಗಲು ಅಮಲಿನಲ್ಲಿ ಇರುತ್ತಾರೆಂದು ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಅಲ್ಲದೆ ದೇವರ ಹೆಸರಿಗೆ ಬಿಡಲಾಗಿದ್ದ ಸುಮಾರು 5.20 ಎಕರೆ ಜಮೀನನ್ನು ತಮ್ಮ ಕುಟುಂಬದ ಹೆಸರಿನಲ್ಲಿ ಮಾಡಿಕೊಂಡು ಜಮೀನಿನ ಬಹು ಭಾಗವನ್ನು ಪರಭಾರೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದರು.
ಗ್ರಾಮಸ್ಥರ ಆರೋಪದ ಬೆನ್ನಲ್ಲೇ ಸ್ಥಳಕ್ಕೆ ತಹಶೀಲ್ದಾರ್ ಕುಂ ಈ ಅಹಮದ್ ಭೇಟಿ ನೀಡಿದ್ರು. ಈ ವೇಳೆ ಅರ್ಚಕ ವೆಂಕಟೇಶ್ ಅಮಲಿನಲ್ಲಿ ಇದ್ದುದ್ದನ್ನು ಕಣ್ಣಾರೆ ಕಂಡರು. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಸಿಬ್ಬಂದಿಗೆ ಸೂಚನೆ ನೀಡಿದ್ದರು.
ಇನ್ನು ಇದೇ ಗ್ರಾಮದಲ್ಲಿರುವ ನರಸಿಂಹ ಸ್ವಾಮಿ ದೇವಾಲಯದ ಅರ್ಚಕ ಗಣೇಶ್ ಎಂಬುವರು ದೇವಸ್ಥಾನಕ್ಕೆ ಬಾರದೆ ದೇವರ ಪೂಜೆಯನ್ನು ಮಾಡದೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದರೆ ದೇವಾಲಯದ ಹೆಸರಿನಲ್ಲಿ ಬರುವ ತಸ್ತಿಕ್ ಹಣವನ್ನು ಪಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ತಹಸೀಲ್ದಾರ್‌ಗೆ ಹೇಳಿದ್ರು, ಹೀಗಾಗಿ ತಕ್ಷಣವೇ ಅರ್ಚಕ ಗಣೇಶ್‌ಗೆ ತಹಶೀಲ್ದಾರ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಇಂದು ಸಂಕ್ರಾಂತಿ ಹಬ್ಬದ ದಿನವಾಗಿದ್ದರೂ ಸಹ ಗ್ರಾಮದ ದೇವಸ್ಥಾನಗಳ ಬಾಗಿಲು ತೆರೆಯದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ಒಂದೆರಡು ವರ್ಷಗಳಿಂದಲೂ ಸಹ ದೇವಾಲಯದ ಅರ್ಚಕರುಗಳು ದೇವಾಲಯದ ಬಾಗಿಲು ಸಹ ತೆಗೆಯದೆ ಕರ್ತವ್ಯ ಲೋಪ ಮಾಡುತ್ತಿದ್ದಾರೆಂದು ಗ್ರಾಮಸ್ಥರು ತಹಸೀಲ್ದಾರ್ ಅಹಮದ್‌ಗೆ ದೂರು ಸಲ್ಲಿಸಿದರು. ಈ ದೇವಾಲಯಕ್ಕೆ ಜಮೀನು ಬಿಟ್ಟರೆ ಬೇರೆ ಏನೂ ಆದಾಯ ಇಲ್ಲದಿರುವ ಹಿನ್ನಲೆಯಲ್ಲಿ ಯಾರು ಸಹ ಪೂಜೆ ಮಾಡಲು ಬರುತ್ತಿಲ್ಲವೆಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮದ ಮುಖಂಡರು ಕೂಡ ಉಪಸ್ಥಿತರಿದ್ದರು.