ತುಮಕೂರು:
ಮೂಲಭೂತ ಸೌಕರ್ಯಗಳ ಬೇಡಿಕೆ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ತುಮಕೂರಿನ ಡಿಸಿ ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದರೂ ಕೂಡ ಜಿಲ್ಲಾಧಿಕಾರಿ ಆಗಲಿ, ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಅಲ್ಲದೇ ಇವರಿಂದ ಮನವಿ ಪತ್ರವನ್ನು ಸ್ವೀಕರಿಸಿಲ್ಲ ಎಂದು ಪ್ರತಿಭಟನಾ ನಿರತ ಅಧಿಕಾರಿಗಳು ಆಕ್ರೋಶ ಹೊರಹಾಕ್ತಿದ್ದಾರೆ.
ಇನ್ನು ಈ ಹಿಂದೆ ಸರ್ಕಾರ ನಮ್ಮ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರು, ಆದರೆ ಸರ್ಕಾರ ಮಾತ್ರ ಈವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಿಗಬೇಕಾದ ಯಾವ ಸೌಲಭ್ಯವೂ ಸಿಗ್ತಾ ಇಲ್ಲ, ಕೂಡಲೇ ನಮಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಮೌನವಾಗಿ ಕುಳಿತು ಅನಿರ್ದಿಷ್ಟ ಅವಧಿ ಮುಷ್ಕರವನ್ನು ಮುಂದುವರೆಸಿದ್ದಾರೆ.
ಈ ವೇಳೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಕಾರ್ಯದರ್ಶಿ ಮಾತನಾಡಿ, ನಮಗೆ ಇರಲು ಜಾಗವಿಲ್ಲ, ನಮಗೆ ಸರಿಯಾದ ಕಚೇರಿ ಕೂಡ ಇಲ್ಲ. ಶೌಚಾಲಯದ ವ್ಯವಸ್ಥೆಯನ್ನು ಮಾಡಿಲ್ಲ, ಆದರೆ ಕೆಲಸ ಮಾತ್ರ ಬೇಗ ಮುಗಿಸಬೇಕು ಸರಿಯಾದ ರೀತಿಯಲ್ಲಿ ಆಗಬೇಕು ಅಂತ ಒತ್ತಡ ಮಾತ್ರ ಹಾಕ್ತಾರೆ ಎಂದು ಕಿಡಿಕಾರಿದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾತನಾಡಿ, ಸರ್ಕಾರದ ಕೊನೆಯ ಅಧಿಕಾರಿಗಳು, VA ಗಳು ಇವರನ್ನು ಅಧಿಕಾರಿಗಳು ನಂಬುವುದಿಲ್ಲ, ಅವರ ಮೇಲೆ ಧೋರಣೆಯನ್ನು ಅನುಸರಿಸುತ್ತಿದ್ದಾರೆ, ಕಳೆದ ಮೂರು ದಿನಗಳಿಂದ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಂಡಿದ್ದರು ಯಾರೊಬ್ಬ ಅಧಿಕಾರಿಯು ನಮ್ಮ ಕಷ್ಟ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಇವರ ಮನವಿಯನ್ನು ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಬೇಕಿದೆ. ಅಲ್ಲದೇ ಕೂಡಲೇ ಸರ್ಕಾರ ನಮ್ಮ ಇಲಾಖೆಗೆ ನೀಡಬೇಕಾದ ಸೌಲಭ್ಯವನ್ನು ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.