ತುಮಕೂರು : ವರುಣ ಸಿಂಚನಕ್ಕೆ ತುಮಕೂರು ಫುಲ್ ಕೂಲ್ ಕೂಲ್

ತುಮಕೂರು :

ಯುಗಾದಿ ಬಳಿಕ ತುಮಕೂರಿನಲ್ಲಿ ಮೊದಲ ಮಳೆಯಾಗಿದ್ದು, ಮಳೆಯ ಸಿಂಚನ ಕಂಡು ತುಮಕೂರಿಗರು ಫುಲ್‌ ಖುಷ್‌ ಆದರು. ನಿನ್ನೆಯಿಂದ ತುಮಕೂರು ಸುತ್ತಾ- ಮುತ್ತಾ ಆಗ್ಗಾಗ್ಗೆ ಮೋಡ ಕವಿದ ವಾತಾವರಣ ಇದ್ದು, ಇಂದು ಮಧ್ಯಾಹ್ನದ ವೇಳೆ ಮಳೆ ಶುರುವಾಯಿತು. ನಗರದ ಕ್ಯಾತ್ಸಂದ್ರ, ಬಟವಾಡಿ, SIT, ಬನಶಂಕರಿ, ಜಯನಗರ, ಶಿರಾಗೇಟ್‌, ಔಟರ್‌ ರಿಂಗ್‌ರೋಡ್‌, ಗುಬ್ಬಿ ಗೇಟ್‌ ಸೇರಿ ನಗರದ ಹಲವೆಡೆ ಮಳೆಯಾಗಿದೆ. ಮಳೆ ಬರ್ತಾ ಇದ್ದಂತೆ ಜನರು ಛತ್ರಿ ಹಿಡಿದು ಸಾಗಿದ ದೃಶ್ಯ ಕಂಡು ಬಂತು.

ಇನ್ನು ತುಮಕೂರಿನಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದೆ. ಮಳೆಯ ಖುಷಿಯಲ್ಲಿ ಜನರು ಮನೆಯಿಂದ ಆಚೆ ಬಂದು ವರುಣನ ಸಿಂಚನದಲ್ಲಿ ಮಿಂದೆದ್ದು ಖುಷಿಯಾದರು. ಮಳೆ ಹಿನ್ನೆಲೆ ವಾಹನ ಸವಾರರು ಕೆಲ ಕಾಲ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ಆಯ್ತು. ಒಟ್ಟಿನಲ್ಲಿ ಚಿಕ್ಕ ಮಳೆಗೆ ತುಮಕೂರು ಫುಲ್‌ ಕೂಲ್‌ ಕೂಲ್‌ ಆಗಿದೆ.

ಇತ್ತ ಮಳೆ ಬಂದ ಖುಷಿಯಲ್ಲಿ ಜನರಿದ್ದರೆ, ಒಂದೇ ಒಂದು ಮಳೆಗೆ ನಗರದ ಹೊರಪೇಟೆ ರಸ್ತೆ ಕೆರೆಯಂತಾದ ಪ್ರಸಂಗ ಎದುರಾಯ್ತು. ಕೋತಿತೋಪಿಗೆ ಹೋಗುವ ರಸ್ತೆಯ ಕರಿ ಬಸವೇಶ್ವರ ಸರ್ಕಲ್‌ನಲ್ಲಿ ಯುಜಿಡಿ ನೀರು ಕಟ್ಟಿಕೊಂಡು ಮಳೆಯ ನೀರಿನ ಜೊತೆ ಸೇರಿ ಕೆರೆಯಂತಾಗಿದ್ದು, ಕೆರೆಯಂತಾದ ರಸ್ತೆಯಲ್ಲೇ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸಿದರು. ಮಳೆಗಾಲ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಚರಂಡಿಗಳನ್ನು ಕ್ಲೀನ್‌ ಮಾಡುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

 

Author:

share
No Reviews