ತುಮಕೂರು : ಊರುಕೆರೆ ಹೆದ್ದಾರಿಯಲ್ಲಿದೆ ಯಮಸ್ವರೂಪಿ ಸ್ಪೀಡ್ ಬ್ರೇಕರ್

ತುಮಕೂರು : 

ಸಾಮಾನ್ಯವಾಗಿ ವಾಹನಗಳ ವೇಗವನ್ನು ಕಡಿಮೆ ಮಾಡೋದಕ್ಕೆ ಅಂತಾ, ಅಪಘಾತಗಳನ್ನು ಕಡಿಮೆ ಮಾಡೋದಕ್ಕೆ ಅಂತಾ ಸ್ಪೀಡ್‌ ಬ್ರೇಕರ್‌ಗಳನ್ನು ಹಾಕ್ತಾರೆ. ಆದರೆ ಇಲ್ಲೊಂದು ಸ್ಪೀಡ್‌ ಬ್ರೇಕರ್‌ ವಾಹನ ಸವಾರರ ಜೀವವನ್ನೇ ಬಲಿ ತೆಗೆದುಕೊಳ್ತಿದೆ. ವಾಹನ ಸವಾರರ ಜೀವ ಹೋಗ್ತಾ ಇದ್ರೂ ಕೂಡ ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಂತಿದ್ದಾರೆ. ಹಾಗಿದ್ದರೆ ಏನಿದು ಸ್ಟೋರಿ ಯಾವುದು ಇದು ಯಮಸ್ವರೂಪಿ ಸ್ಪೀಡ್‌ ಬ್ರೇಕರ್‌ ಅಂತೀರಾ ಈ ಸ್ಟೋರಿ ನೋಡಿ.

ತುಮಕೂರಿನ ಊರುಕೆರೆ ಮಾರ್ಗವಾಗಿ ಹಾದುಹೋಗುವ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇದಿನೇ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ನಿಯಮಬಾಹಿರವಾಗಿ ಹಾಗೂ ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳ ಅಳವಡಿಕೆಯಿಂದಲೇ ಅಪಘಾತಗಳಾಗುತ್ತಿವೆ ಅನ್ನೋ ಆರೋಪ ಕೇಳಿಬಂದಿದೆ. ಈ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಸ್ಪೀಡ್ ಬ್ರೇಕರ್‌ ನಿಂದಾಗಿ ಒಂದೇ ದಿನ ಮೂರು ಅಪಘಾತಗಳಾಗಿದ್ದು, ಇದರಿಂದಾಗಿ ವಾಹನ ಸವಾರರು ಆತಂಕಗೊಂಡಿದ್ದಾರೆ.

ತುಮಕೂರು- ರಾಯದುರ್ಗ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಈ ಸ್ಪೀಡ್ ಬ್ರೇಕರ್ ಅನ್ನ ಅಳವಡಿಸಲಾಗಿದೆ. ಆದರೆ ಇಲ್ಲಿ ಯಾವುದೇ ಸೂಚನಾ ಫಲಕಗಳನ್ನು ಹಾಕಲಾಗಿಲ್ಲ. ಸಿಗ್ನಲ್‌ ಅಥವಾ ಎಚ್ಚರಿಕೆ ಪಟ್ಟಿಗಳನ್ನು ಕೂಡ ಅಳವಡಿಸಿಲ್ಲ. ಹೇಗಿದ್ದರೂ ಹೈವೇ. ಇಲ್ಲಿ ಸ್ಪೀಡ್‌ ಬ್ರೇಕರ್‌ ಇರೋದಕ್ಕೆ ಸಾಧ್ಯವೇ ಇಲ್ಲಾ ಅಂತಾ ವೇಗವಾಗಿ ಬರೋ ವಾಹನಗಳು ಅಪಘಾತಕ್ಕೀಡಾಗ್ತಿವೆ.

ಇನ್ನು ಸ್ಥಳೀಯರು ಮತ್ತು ವಾಹನ ಚಾಲಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ಈ ಬ್ರೇಕರ್ ಅಳವಡಿಸಲಾಗಿದೆ. ಇದು ಅಪಘಾತಗಳನ್ನು ತಡೆಯುವುದಕ್ಕಿಂತ ಹೆಚ್ಚಿಸುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಕೂಡಲೇ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅದೇನೆ ಇರಲಿ. ಅಪಘಾತವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಕುವ ಸ್ಪೀಡ್‌ ಬ್ರೇಕರ್‌ ಈಗ ಅಪಘಾತಗಳು ಹೆಚ್ಚಾಗುವಂತೆ ಮಾಡ್ತಾ ಇದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಇಲ್ಲಿ ಆಗುತ್ತಿರುವ ಅಪಘಾತಗಳಿಗೆ  ಕಡಿವಾಣ ಹಾಕೋದಕ್ಕೆ ಮುಂದಾಗುತ್ತಾ ಅಂತಾ ಕಾದು ನೋಡಬೇಕಿದೆ.

Author:

...
Shabeer Pasha

Managing Director

prajashakthi tv

share
No Reviews