ತುಮಕೂರು : ತುಮಕೂರು ಪೊಲೀಸರ ಭರ್ಜರಿ ಭೇಟೆ | ಖಾಕಿ ಖೆಡ್ಡಾಗೆ ಬಿದ್ದ ಕುಖ್ಯಾತ ಬೈಕ್ ಕಳ್ಳ

ತುಮಕೂರು :

ತುಮಕೂರು ಜಿಲ್ಲೆಯ ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ಬರೋಬ್ಬರಿ 30 ವಿವಿಧ, ಸುಮಾರು 11 ಲಕ್ಷದ 23 ಸಾವಿರದ ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಆರೋಪಿ ಚಿತ್ತಪ್ಪಗಾರಿ ಆನಂದ್‌ ಮೂಲತಃ ವ್ಯಕ್ತಿಯಾಗಿದ್ದು, ಬೆಂಗಳೂರು ನಗರದಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡ್ತಾ ಇದ್ದ. ಈ ಐನಾತಿ ಖದೀಮ ತುಮಕೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೈಕ್‌ಗಳನ್ನು ಟಾರ್ಗೆಟ್‌ ಮಾಡಿ ಕಳ್ಳತನ ಮಾಡ್ತಾ ಇದ್ದ. ಇತ್ತೀಚೆಗೆ ಭಾರದ್ವಾಜ್‌ ಎಂಬುವವರು ರಸ್ತೆ ಬದಿ ಪಾರ್ಕಿಂಗ್‌ ಮಾಡಿದ್ದ ವೇಳೆ ಅವರ ಬೈಕ್‌ ಕಳ್ಳತನವಾಗಿತ್ತು. ಈ ಕುರಿತು ಬೈಕ್‌ ಮಾಲೀಕ ಹೊಸ ಬಡಾವಣೆ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಚಿತ್ತಪ್ಪ ಆನಂದ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಳ್ಳತನದ ಕರಾಮತ್ತು ಬಯಲಾಗಿದೆ.

ಈ ಬೈಕ್‌ ಕಳ್ಳ ಹೆಚ್ಚಾಗಿ ಹೋಂಡಾ ಡಿಯೋ ಮಾದರಿಯ ಬೈಕ್‌ಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡ್ತಾ ಇದ್ದು, ಖತರ್ನಾಕ್‌ ಕಳ್ಳ ಮಾರಾಟದ ಉದ್ದೇಶದಿಂದ ಜಾಗಗಳನ್ನು ಬದಲಾಯಿಸುತ್ತಿದ್ದ ಎನ್ನಲಾಗಿದೆ. ಇನ್ನು ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಹೊಸಬಡಾವಣೆ ಪೊಲೀಸರು ಯಶಸ್ವಿಯಾಗಿದ್ದು, ಪೊಲೀಸರ ಈ ಕಾರ್ಯಾಚರಣೆಗೆ ತುಮಕೂರು ಎಸ್‌ಪಿ ಅಶೋಕ್‌ ವೆಂಕಟ್‌ ಪ್ರಶಂಸಿಸಿದ್ದಾರೆ.

ಇನ್ನು ಐನಾತಿ ಕಳ್ಳನಿಂದ ಸೀಜ್‌ ಆದ ಬೈಕ್‌ಗಳನ್ನು ವರಸುದಾರರನ್ನು ಪತ್ತೆ ಹಚ್ಚಿ ಬೈಕ್‌ಗಳನ್ನು ಹಸ್ತಾಂತರ ಮಾಡುವ ಕೆಲಸವನ್ನು ಪೊಲೀಸರು ಮಾಡ್ತಾ ಇದ್ದಾರೆ. ಒಟ್ಟಾರೆ ಪೊಲೀಸರ ಕಾರ್ಯಕ್ಕೆ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ದಾರೆ.

Author:

...
Sushmitha N

Copy Editor

prajashakthi tv

share
No Reviews