ತುಮಕೂರು :
ಮಾಜಿ ಶಾಸಕ ಡಿ.ಸಿ ಗೌರಿಶಂಕರ್ ನೆನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಾವರಿ ಇಲಾಖೆಯಲ್ಲಿ 1 ಕೋಟಿಯಷ್ಟು ಬ್ರಹ್ಮಂಡ ಭ್ರಷ್ಟಾಚಾರ ಆಗಿದೆ ಎಂದು ದಾಖಲೆ ಸಮೇತ ಬಯಲಿಗೆಳೆದಿದ್ದರು. ಅಲ್ಲದೇ ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು. ಭ್ರಷ್ಟಾಚಾರ ತಾಂಡವದ ಬಗ್ಗೆ ಬಯಲಾಗ್ತಿದ್ದಂತೆ ಸುರೇಶ್ ಗೌಡ ಮಾಜಿ ಶಾಸಕ ಗೌರಿಶಂಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೇ ಇಬ್ಬರ ನಾಯಕರ ನಡುವಿನ ಗುದ್ದಾಟ ಮತ್ತೊಂದು ಹಂತಕ್ಕೆ ತಲುಪಿದ್ದು ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ.
ಮಾಜಿ ಶಾಸಕ ಗೌರಿಶಂಕರ್ ಆರೋಪವನ್ನು ತಳ್ಳಿಹಾಕಿದ ಶಾಸಕ ಸುರೇಶ್ ಗೌಡ, ಅವರದ್ದೇ ಸರ್ಕಾರ ಇರೋದು ತನಿಖೆ ಮಾಡಿಸಲಿ ಬಿಡಿ ಎಂದಿದ್ದಾರೆ. ಯಾವುದ್ದೋ ಅಧಿಕಾರಿಯನ್ನು ಬಲಿ ಹಾಕಬೇಕು ಅಂತಾ ಅವರ ತಲೆ ಒಳಗೆ ಇದೆ, ಈಗಾಗಲೇ ಎಷ್ಟೋ ಅಧಿಕಾರಿಗಳು ಸತ್ತಿದ್ದಾರೆ. ಇಲ್ಲೋ ಯಾರಾದರೂ ಇಬ್ಬರನ್ನು ಸಾಯಿಸಬೇಕು ಅಂತಾ ಹೊರಟಿದ್ದಾರೆ ಎಂದು ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ನನ್ನ ಕ್ಷೇತ್ರದಲ್ಲಿ ಗೌರಿಶಂಕರ್ ಅವರು ನಕಲಿ ಬಾಂಡ್ ಹಂಚಿ ಚುನಾವಣೆಯಿಂದ ಡಿಸ್‌ಕ್ವಾಲಿಫೈ ಆಗಿರೋರು ಎಂದು ಟೀಕಿಸಿದ್ರು. ಅಲ್ಲದೇ ನಕಲಿ ವ್ಯಾಕ್ಸಿನೇಷನ್ ಹಾಕಿಸಿ ತನಿಖೆಯನ್ನು ಎದುರಿಸ್ತಾ ಇರೋರು ನಿಮಗೆ ಯಾವ ನೈತಿಕತೆ ಇದೆ ಎಂದು ಗೌರಿಶಂಕರ್‌ಗೆ ನೇರವಾಗಿ ಸುರೇಶ್‌ಗೌಡ ಪ್ರಶ್ನಿಸಿದರು. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡದಿದ್ದರೆ ನಿಮ್ಮ ತಿಂದ ಕೂಳು ಅರಗಲ್ಲ ಅಂತಾ ಟೀಕಾಪ್ರಹಾರ ನಡೆಸಿದರು.
ಇನ್ನು ನಕಲಿ ಬಾಂಡ್ ಬಗ್ಗೆ ಸುರೇಶ್‌ಗೌಡ ಸಿಡಿಸಿದ ಬಾಂಬ್‌ಗೆ ಗೌರಿಶಂಕರ್ ಬ್ಲ್ಯಾಸ್ಟ್ ಆಗಿದ್ದು, ಸುರೇಶ್ ಗೌಡ ಒಬ್ಬ ಮಾರ್ಕ್ಸ್ ಕಾರ್ಡ್ ಕಳ್ಳ, ಮಾರ್ಕ್ಸ್ ಕಾರ್ಡ್ ದಂಧೆ ನಡೆಸಿ ಜೀವನ ನಡೆಸಿದವನು ಎಂದು ಏಕವಚನದಲ್ಲೇ ಗೌರಿಶಂಕರ್ ವಾಗ್ದಾಳಿ ನಡೆಸಿದರು. ಸುರೇಶ್ ಗೌಡ ಡಿಗ್ರಿ ಎಕ್ಸಾಂ ವೇಳೆ ಕಾಫಿ ಹೊಡೆದು ಡಿಬಾರ್ ಆಗಿ, ಅಪಾಲಜಿ ಬರೆದುಕೊಟ್ಟಂತಹ ಕಳ್ಳ ಅಂದರೆ ಅದು ಸುರೇಶ್ ಗೌಡ. ಅಲ್ಲದೇ ಹಿಂಗು ತಿಂದ ಮಂಗನಂತೆ ಆಗಿದ್ದಾನೆ, ಯಾಕೆಂದರೆ ಬರ್ತಾ ಇದ್ದ ಒಂದು ಕೋಟಿ ಹಣ ತಪ್ಪೋಯ್ತಲ್ವಾ ಅದಕ್ಕೆ ಹೀಗೆ ಮಾತಾಡ್ತಾ ಇದ್ದಾನೆ ಎಂದು ಕಿಡಿಕಾರಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಆಗಿರೋ ಭ್ರಷ್ಟಾಚಾರಕ್ಕೆ ಸುರೇಶ್‌ಗೌಡನೇ ಕುಮ್ಮಕ್ಕು ಕೊಟ್ಟಿರೋದು ಅಂತಾ ಮತ್ತೊಮ್ಮೆ ಗಂಭೀರ ಆರೋಪವನ್ನು ಮಾಡಿದ್ದಾರೆ.
ಇನ್ನು ನನ್ನ ಕ್ಷೇತ್ರದ ಜನರ ಮುಂದೆ ನನ್ನ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆಯುವುದು, ಭೂತದ ಬಾಯಲ್ಲಿ ಭಗವದ್ಗೀತೆ ಹೇಳೋದನ್ನು ನನ್ನ ಕ್ಷೇತ್ರದ ಜನ ನೋಡಿದ್ದಾರೆ, ನಿಮ್ಮ ಮಾತನ್ನು ನನ್ನ ಕ್ಷೇತ್ರದ ಜನ ಎಂದಿಗೂ ನಂಬೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದಿಷ್ಟಲ್ಲದೇ ವೈಯಕ್ತಿಕ ಟೀಕೆಗೆ ಇಬ್ಬರು ನಾಯಕರು ಇಳಿದಿದ್ದು ಪರಸ್ಪರ ಟೀಕಾಪ್ರಹಾರ ನಡೆಸಿಕೊಂಡಿದ್ದಾರೆ. ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ನಿನ್ನನ್ನು ಹಾಗೂ ನಿಮ್ಮ ಅಪ್ಪನ್ನು ನೋಡಿಕೊಂಡೆ ಬಂದಿದ್ದೇನೆ. ನಿಮ್ಮ ಅಪ್ಪ ಎಷ್ಟು ಭ್ರಷ್ಟಾ ಅಂತಾ ಇಡೀ ರಾಜ್ಯವೇ ನೋಡಿದೆ. ಎಂದು ಸುರೇಶ್ ಗೌಡ ಗೌರಿಶಂಕರ್‌ರನ್ನು ಕಿಚಾಯಿಸಿದ್ದಾರೆ. ಇತ್ತ ಸುರೇಶ್‌ಗೌಡಗೆ ಟಾಂಕ್ ಕೊಟ್ಟ ಗೌರಿಶಂಕರ್ ಶಾಸಕ ಸುರೇಶ್ ಗೌಡ ಅವರ ಅಪ್ಪ ಮೀಟರ್ ರೀಡ್ ಮಾಡ್ತಾ ಇದ್ರಂತೆ, ಯಾರದ್ದೋ ಮನೆಗೆ ನುಗ್ಗಿ ಏನೋ ಮಾಡಲೋಗಿ ಅವರ ಅಪ್ಪನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಹೀಗೆ ನಿನ್ನನ್ನು ಕೂಡ ಜನ ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ ಅಂತಾ ಸುರೇಶ್‌ಗೌಡ ಮಾತಿಗೆ ತಿರುಗೇಟು ನೀಡಿದರು.
ಇನ್ನು ನನ್ನ ಕ್ಷೇತ್ರದಲ್ಲಿ ಆಗಿರೋ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿ, ನಾನು ಯಾವ ತನಿಖೆಗೂ ಹೆದರಲ್ಲ ಎಂದು ಸುರೇಶ್‌ಗೌಡ ಸವಾಲೆಸಿದ್ರೆ, ಸುರೇಶ್‌ಗೌಡ ನೀನು ನಿನ್ನ ದುರಂಹಾರಕವನ್ನು ಬಿಟ್ಟು ಬಿಡು, ಇದನ್ನು ನಿನ್ನ ಚೇಲಗಳ ಹತ್ತಿರ ಇಟ್ಟುಕೋ ನನ್ನ ಹತ್ತಿರ ನಡೆಯೊಲ್ಲ ಎಂದು ಗೌರಿಶಂಕರ್ ವಾಗ್ಬಾಣ ಮಾಡಿದ್ದಾರೆ.
ಒಟ್ಟಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಯಕರ ಜಟಾಪಟಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.