ತುಮಕೂರು:
ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ದಿಯಾಗುತ್ತಿದೆ. ಅದೇ ರೀತಿ ತುಮಕೂರಿನಲ್ಲಿ ಸಮಸ್ಯೆಗಳು ಕೂಡ ಬೆಳೆಯುತ್ತಿವೆ. ಈ ಸಮಸ್ಯೆಗಳಲ್ಲಿ ಫುಟ್ಪಾತ್ ಒತ್ತುವರಿ ಸಮಸ್ಯೆ ಕೂಡ ಒಂದು. ಮಹಾನಗರ ಪಾಲಿಕೆ ಅಧಿಕಾರಿಗಳು ಈ ಸಮಸ್ಯೆಗೆ ಶಾಸ್ವತ ಪರಿಹಾರ ನೀಡುವ ಬದಲು, ಬಡ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡ್ತಿದ್ದು, ಪಾಲಿಕೆ ಅಧಿಕಾರಿಗಳ ದಿಢೀರ್ ದಾಳಿಗೆ ಬೀದಿಬದಿ ವ್ಯಾಪಾರಸ್ಥರು ಕಂಗಾಲಾಗಿ ಹೋಗಿದ್ದಾರೆ.
ತುಮಕೂರು ನಗರದ ಅಶೋಕ ರಸ್ತೆಯ ಎರಡೂ ಕಡೆಗಳಲ್ಲಿ ಕಳೆದ ೪೦-೫೦ ವರ್ಷಗಳಿಂದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡಿಕೊಂಡು ಬರ್ತಿದ್ದಾರೆ. ಈವರೆಗೂ ಪಾಲಿಕೆಯಿಂದ ಇವರಿಗೆ ಅಂಗಡಿ ತೆರವುಗೊಳಿಸಲು ಯಾವುದೇ ನೋಟೀಸ್ ಕೂಡ ನೀಡದೇ, ಇಂದು ಪಾಲಿಕೆ ಅಧಿಕಾರಿಗಳು ಏಕಾಏಕಿ ಬಂದು ಫುಟ್ ಪಾತ್ ಮೇಲಿದ್ದ ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳನ್ನು ತೆರವು ಮಾಡಿಸಿದ್ದು, ಇದರಿಂದ ಈ ಬಡ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ವ್ಯಾಪಾರಿಗಳು ದಶಕಗಳಿಂದ ಈ ಜಾಗದಲ್ಲಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದೇವೆ. ಆದರೆ ಹೀಗೆ ಏಕಾಏಕಿ ಬಂದು ಅಂಗಡಿ ತೆರವು ಮಾಡಿ ಅಂದರೆ ನಮ್ಮ ವ್ಯಾಪಾರಕ್ಕೆ ತೊಂದರೆ ಆಗುತ್ತೆ. ನಾವು ಈ ವ್ಯಾಪಾರವನ್ನೇ ನಂಬಿಕೊಂಡು ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಅಂಗಡಿಲಿ ವ್ಯಾಪಾರ ಮಾಡಿಲ್ಲ ಅಂದರೆ ನಮ್ಮ ಜೀವನ ನಡೆಯಲ್ಲ. ನಮ್ಮ ವ್ಯಾಪಾರ ಮಾಡುತ್ತಿದ್ದ ಜಾಗದಿಂದ ತೆಗೆದುಕೊಂಡು ಬಂದು ಬೇರೆ ಜಾಗಕ್ಕೆ ತಂದುಹಾಕಿದ್ದಾರೆ. ಹೀಗೆಲ್ಲ ಬಂದು ನಮಗೆ ಏಕಾಏಕಿ ತೆರವು ಮಾಡಿ ಅಂತ ಆದೇಶ ಮಾಡುವ ಬದಲು ಸ್ವಲ್ಪ ವಿಷ ಕೊಟ್ಟುಬಿಡಿ. ಅದನ್ನು ಕುಡಿದು ನೆಮ್ಮದಿಯಿಂದ ಪ್ರಾಣಬಿಟ್ಟುಬಿಡ್ತೀವಿ ಅಂತಾ ಕಣ್ಣೀರು ಹಾಕಿದ್ದಾರೆ.
ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿದ್ದರಿಂದ ಇವತ್ತು ವ್ಯಾಪಾರಸ್ಥರು ವ್ಯಾಪಾರಕ್ಕೆಂದು ತಯಾರು ಮಾಡಿಕೊಂಡಿದ್ದ ಅಡುಗೆ, ಚಾಟ್ಸ್ ಎಲ್ಲಾ ವೇಸ್ಟ್ ಆಗಿದೆ. ಹೀಗಾಗಿ ನಾವು ಇದನ್ನ ಯಾರಿಗೇಳೋದು. ನಮ್ಮ ಕಷ್ಟ ಕೇಳೋರ್ಯಾರು? ಈ ಹಿಂದೆ ಇದ್ದ ಅಧಿಕಾರಿಗಳು ನಮಗೆ ಸಮಯ ಕೊಡ್ತಾ ಇದ್ರು. ಆದರೆ ಈಗಿನ ಕಮಿಷನರ್ ಸಮಯ ಕೊಡದೆ ಈ ರೀತಿ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ನಮ್ಮ ಹೆಂಡತಿ ಮಕ್ಕಳನ್ನು ಅವರೇನಾದರೂ ಬಂದು ಸಾಕ್ತಾರಾ? ನಮ್ಮ ಹೆಂಡತಿ ಮಕ್ಕಳನ್ನು ಕರ್ಕೊಂಡು ಪಾಲಿಕೆ ಹತ್ರ ಬರ್ತೀವಿ. ನಮಗೆ ನ್ಯಾಯ ಕೊಡ್ತಾರಾ? ನಮಗೆ ನ್ಯಾಯ ಕೊಟ್ಟಿಲ್ಲ ಅಂದರೆ ಕಮಿಷನರ್ ಆಫೀಸ್ ಮುಂದೆ ವಿಷ ಕುಡಿಯುತ್ತೇವೆ ಎಂದು ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಇನ್ನಾದರೂ ಪಾಲಿಕೆ ಅಧಿಕಾರಿಗಳು ಸಮಸ್ಯೆ ಬಗ್ಗೆ ಎಚ್ಚೆತ್ತುಕೊಂಡು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.