ತುಮಕೂರು :
ತುಮಕೂರಿನ ಸಿಂಗಂ ಅಂತಲೇ ಕರೆಸಿಕೊಳ್ತಿದ್ದ ಇನ್‌ಸ್ಪೆಕ್ಟರ್. ಖಡಕ್ ಪೊಲೀಸ್ . ಖದರ್ ಆಗಿಯೇ ಕೆಲಸ ಮಾಡ್ತಿದ್ದ ಆಫೀಸರ್. ಕೈಯಲ್ಲಿ ಲಾಠಿ ಹಿಡಿದು ಫೀಲ್ಡಿಗೆ ಇಳಿದಿದ್ದರೆ ಕಿಡಿಗೇಡಿಗಳು ಬಾಲಮುದುರಿಕೊಂಡು ಮೂಲೆ ಸೇರ್ತಾ ಇದ್ರು. ಆ ಮೀಸೆ ಮ್ಯಾನ್ ಬರ್ತಾರೆ ಅನ್ನೋದು ಗೊತ್ತಾದರೆ ಸಾಕು ಕೆಟ್ಟ ಹುಳುಗಳು ಕಮಕ್ ಕಿಮಕ್ ಅನ್ನದೆಯೇ ಹಾಗ ಖಾಲಿ ಮಾಡ್ತಿದ್ರು. ಪುಡಿ ರೌಡಿಗಳಿಗೆ, ಪುಂಡ ಪೋಕರಿಗಳಿಗೆ ಅಷ್ಟರ ಮಟ್ಟಿಗೆ ಭಯ ಹುಟ್ಟಿಸಿದ್ದ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಇದೀಗ ವರ್ಗಾವಣೆಗೊಂಡಿದ್ದು, ಅವರಿಗೆ ತುಮಕೂರಿನಲ್ಲಿ ಅದ್ದೂರಿ ಬೀಳ್ಕೊಡುಗೆಯನ್ನು ನೀಡಲಾಯಿತು.
ಹಿಂದೆಯೂ ತುಮಕೂರಿನಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿದ್ದ ದಿನೇಶ್ ಕುಮಾರ್, ಕಳೆದ ಒಂದು ಒಂದೂವರೆ ವರ್ಷದ ಹಿಂದೆ ತುಮಕೂರು ಟೌನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿ ನಿಯುಕ್ತಿಗೊಂಡಿದ್ದರು. ನಗರದ ಅತ್ಯಂತ ಪ್ರಮುಖ ಬಿಸಿನೆಸ್ ಏರಿಯಾಗಳನ್ನು ಹೊಂದಿರುವ ಜೊತೆಗೆ ಶಿರಾ ಗೇಟ್‌ವರೆಗೂ ತನ್ನ ವ್ಯಾಪ್ತಿಯನ್ನು ಹೊಂದಿರುವ ಈ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು ನಿಭಾಯಿಸೋದು ಅಷ್ಟು ಸುಲಭದ ಮಾತಲ್ಲ. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನೆಲ್ಲಾ ಮಟ್ಟಹಾಕುವ ಪ್ರಯತ್ನ ಮಾಡಿದ್ರು. ಈ ಮೂಲಕ ಮೇಲಧಿಕಾರಿಗಳ ಒತ್ತಡವನ್ನು ಕೂಡ ಕಡಿಮೆ ಮಾಡಿದ್ದ ದಿನೇಶ್ ಕುಮಾರ್ ಇದೀಗ ಕೊಡಗು ಜಿಲ್ಲೆಯ ಕುಶಾಲ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಅದ್ದೂರಿ ಬೀಳ್ಕೊಡುಗೆ ನೀಡಿದ್ದಾರೆ.
ನಗರದ ಚಿಕ್ಕಪೇಟೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ದಿನೇಶ್ ಕುಮಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು. ಡಿವೈಎಸ್‌ಪಿ ಚಂದ್ರಶೇಖರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ದಿನೇಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದ ಪೊಲೀಸರು ಮತ್ತು ಅವರ ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು. ಈ ವೇಳೆ ದಿನೇಶ್ ಕುಮಾರ್ ಅವರ ಮೇಲೆ ಹೂಮಳೆಯನ್ನ ಸುರಿಸಿ, ಅವರನ್ನ ಹೆಗಲಮೇಲೆ ಹೊತ್ತು ಮೆರವಣಿಗೆಯನ್ನ ಕೂಡ ಮಾಡಿದ್ರು. ನಂತರ ಶಾಲು, ಹಾರ ಹಾಕಿ ಗೌರವವನ್ನ ಕೂಡ ಸಲ್ಲಿಸಲಾಯಿತು.
ಒಟ್ಟಿನಲ್ಲಿ ವಕೀಲರ ಜೊತೆಗಿನ ಗಲಾಟೆ ಸೇರಿದಂತೆ ಹಲವು ವಿಚಾರದಲ್ಲಿ ವಿವಾದವನ್ನ ಕೂಡ ತಲೆಮೇಲೆ ಎಳೆದುಕೊಂಡಿದ್ದ ದಿನೇಶ್ ಕುಮಾರ್ ತುಮಕೂರಿನಲ್ಲಿ ಒಳ್ಳೆಯ ಕೆಲಸದಿಂದಲೂ ಗುರುತಿಸಿಕೊಂಡಿದ್ದರು. ಇದೀಗ ಅವರು ವರ್ಗಾವಣೆಗೊಂಡಿರೋದು ಅವರ ಅಭಿಮಾನಿಗಳಿಗೆ ಬೇಸರ ತರಿಸಿರೋದಂತೂ ಸತ್ಯ.