ತುಮಕೂರು:
ಇವತ್ತು ಹೇಳಿ ಕೇಳಿ ಭಾನುವಾರ, ಭರ್ಜರಿ ಬಾಡೂಟ ತಿನ್ನಬೇಕು ಅಂತಾ ಅಂದುಕೊಂಡಿರೋ ಮಾಂಸಪ್ರಿಯರಿಗೆ ತುಮಕೂರು ಪಾಲಿಕೆ ಶಾಕ್ ನೀಡಿದೆ. ನಿನ್ನೆ ಅಂದರೆ ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಮಧ್ಯರಾತ್ರಿ 12 ಗಂಟೆವರೆಗೂ ತುಮಕೂರು ನಗರದಾದ್ಯಂತ ಮಾಂಸದಂಗಡಿಗಳನ್ನು ಬಂದ್ ಮಾಡುವಂತೆ ಪಾಲಿಕೆ ಆಯುಕ್ತೆ ಅಶ್ವಿಜಾ ಆದೇಶ ಹೊರಡಿಸಿದರು. ಇಂದು ಶ್ರೀರಾಮನವಮಿ ಹಬ್ಬ ಇರುವ ಹಿನ್ನೆಲೆ ಮಾಂಸ ಮಾರಾಟವನ್ನು ಮಾಡದಂತೆ ಆದೇಶ ಹೊರಡಿಸಲಾಗಿತ್ತು. ಹೀಗಾಗಿ ಪಾಲಿಕೆ ವ್ಯಾಪ್ತಿಯ ಹಲವೆಡೆ ಚಿಕನ್, ಮಟನ್, ಮೀನು ಮಾರಾಟ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಇನ್ನು ಪಾಲಿಕೆ ವ್ಯಾಪ್ತಿಯಲ್ಲಿದ್ದ ಮಾಂಸದ ಅಂಗಡಿ ಮಾಲೀಕರು ಆದೇಶದಂತೆ ಮಾಂಸದ ಅಂಗಡಿಗಳನ್ನು ಬಂದ್ ಮಾಡಿದರು. ಹಬ್ಬದ ದಿನಗಳಲ್ಲಿ ಕೆಲವು ತಾತ್ಕಾಲಿಕ ನಿರ್ಬಂಧಗಳು ಸಾಮಾನ್ಯವಾದರೂ, ಮಾಂಸಪ್ರಿಯರು ವಾರಾಂತ್ಯದ ಸಂಡೆ ಸ್ಪೆಷಲ್ ನಿರೀಕ್ಷೆಗಳಿಂದ ವಂಚಿತರಾಗಿದ್ದಾರೆ. ಅದಲ್ಲದೇ, ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲಾ ಅಂಗಡಿಗಳಿಗೆ ನಿಷೇಧದ ಮಾಹಿತಿ ಮುಂಚಿತವಾಗಿಯೇ ತಿಳಿಸಲಾಗಿದ್ದು, ಈ ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು.
ಪಾಲಿಕೆ ಆಯುಕ್ತೆ ಆದೇಶದನ್ವಯ ನಗರದಾದ್ಯಂತ ಮಾಂಸದ ಅಂಗಡಿಗಳನ್ನು ಕ್ಲೋಸ್ ಮಾಡಲಾಗಿತ್ತು, ಆದರೆ ಕೆಲವೆಡೆ ಆದೇಶವನ್ನು ಧಿಕ್ಕರಿಸಿ ಕೆಲ ಮಾಂಸದಂಗಡಿ ಮಾಲೀಕರು ಅಂಗಡಿ ಓಪನ್ ಮಾಡಿ ಮಾಂಸವನ್ನು ಮಾರಾಟ ಮಾಡಿದ್ದು ಕಂಡು ಬಂದಿತ್ತು. ಆದೇಶ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳುತ್ತಾ ಎಂದು ಕಾದುನೋಡಬೇಕಿದೆ.